ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗಿದ್ದ 20 ಮತ ಪೆಟ್ಟಿಗೆಗಳ ಪೈಕಿ ಎಂಟಕ್ಕೂ ಹೆಚ್ಚು ಪೆಟ್ಟಿಗೆಗಳ ಸೀಲ್ ಒಡೆದ ಸ್ಥಿತಿಯಲ್ಲಿದ್ದವು ಅಥವಾ ಬೀಗಗಳೇ ಇರಲಿಲ್ಲ ಎಂದು ಮುರೋಳ್ಳಿ ಆರೋಪಿಸಿದ್ದಾರೆ. ವಿಶೇಷವಾಗಿ, ಪೋಸ್ಟಲ್ ಬ್ಯಾಲೆಟ್‌ಗಳನ್ನು ಹೊಂದಿದ್ದ 20ನೇ ಸಂಖ್ಯೆಯ ಪೆಟ್ಟಿಗೆಯು ಉಳಿದ 19 ಪೆಟ್ಟಿಗೆಗಳಿಗಿಂತ ಭಿನ್ನವಾಗಿತ್ತು ಮತ್ತು ಅದಕ್ಕೆ ಹಾಕಿದ್ದ ಕವರ್ ಕೂಡ ಹೊಸದಾಗಿತ್ತು ಎಂಬುದು ಅವರ ವಾದವಾಗಿದೆ. ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಮರು ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ ಬಂದಿದ್ದ 257 ಮತಗಳನ್ನು ಅಸಿಂಧು (Invalid) ಎಂದು ಘೋಷಿಸಲಾಗಿದೆ ಎಂದಿರುವ ಅವರು ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಅಥವಾ ಇತರ ಅಭ್ಯರ್ಥಿಗಳ ಮತಗಳಲ್ಲಿ ಇಂತಹ ಯಾವುದೇ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜೇಗೌಡ ಅವರ ಮತಗಳನ್ನು ಅಸಿಂಧುಗೊಳಿಸಲು 'ಡಬಲ್ ಎಂಟ್ರಿ' ತಂತ್ರ ಬಳಸಲಾಗಿದೆ ಎಂದು ಮುರೋಳ್ಳಿ ದೂರಿದ್ದಾರೆ. ಬ್ಯಾಲೆಟ್ ಪೇಪರ್‌ನಲ್ಲಿ ರಾಜೇಗೌಡ ಅವರ ಹೆಸರಿನ ಕೆಳಗೆ ಮತ್ತೊಂದು ಗೆರೆ ಎಳೆಯುವ ಮೂಲಕ ಅದನ್ನು ಮಲ್ಟಿಪಲ್ ಎಂಟ್ರಿ ಎಂದು ತೋರಿಸಿ ಅಸಿಂಧುಗೊಳಿಸಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ. ಈ ಘಟನೆಯು ಅಂದಿನ ಚುನಾವಣಾಧಿಕಾರಿ (Returning Officer) ವೇದಮೂರ್ತಿ ಅವರ ಬೇಜವಾಬ್ದಾರಿಯಿಂದ ನಡೆದಿದೆ ಎಂದು ಮುರೋಳ್ಳಿ ಕಿಡಿಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದಿನ ಚುನಾವಣಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಈ ಕ್ಷೇತ್ರದ ಫಲಿತಾಂಶ ಇನ್ನೂ ಅಧಿಕೃತವಾಗಿ ಪ್ರಕಟವಾಗದ ಕಾರಣ, ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.
PublicNext
03/05/2026 09:52 am
LOADING...