ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಭರ್ಜರಿ ಮುನ್ನಡೆ ಸಾಧಿಸಿ ಜಯಭೇರಿಯತ್ತ ಮುನ್ನುಗ್ಗುತ್ತಿದ್ದರೆ, ಇತ್ತ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಮತ್ತು ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಮತ ಎಣಿಕೆ ಕೇಂದ್ರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ಮಧ್ಯಾಹ್ನ 3 ಗಂಟೆಯಿಂದಲೇ ನಮ್ಮ ಮೇಲೆ ದಾಳಿ ನಡೆಸಲಾಗುತ್ತಿದೆ. ಸಿಆರ್‌ಪಿಎಫ್ (CRPF) ಸಿಬ್ಬಂದಿಯ ಮುಂದೆಯೇ ನನ್ನನ್ನು ತಳ್ಳಾಡಿ, ಹಲ್ಲೆ ಮಾಡಲಾಗಿದೆ. ಆ ಸಮಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ನಮ್ಮ ಯಾವುದೇ ಏಜೆಂಟರನ್ನು ಎಣಿಕೆ ಕೇಂದ್ರದೊಳಗೆ ಬಿಡುತ್ತಿಲ್ಲ," ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
2026ರ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಹಾದಿಯಲ್ಲಿರುವುದನ್ನು ಕಂಡ ಮಮತಾ, ಚುನಾವಣಾ ಆಯೋಗದ ಮೇಲೆ ನೇರ ವಾಗ್ದಾಳಿ ನಡೆಸಿದರು. "ಭಾರತೀಯ ಚುನಾವಣಾ ಆಯೋಗವು ಈಗ ಬಿಜೆಪಿಯ ಆಯೋಗವಾಗಿ ಬದಲಾಗಿದೆ. ಕೇಂದ್ರ ಪಡೆಗಳು ಪ್ರಧಾನಿ ಮತ್ತು ಗೃಹ ಸಚಿವರೊಂದಿಗೆ ಶಾಮೀಲಾಗಿ ಕೇಸರಿ ಪಕ್ಷಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸುತ್ತಿವೆ. ಸುಮಾರು 100ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಲೂಟಿ ಮಾಡಿದೆ," ಎಂದು ಅವರು ದೂರಿದ್ದಾರೆ.
"ಇದು ಜನರ ಗೆಲುವಲ್ಲ, ಇದೊಂದು ಅನೈತಿಕ ಗೆಲುವು. ಕೇಂದ್ರ ಪಡೆ ಮತ್ತು ಆಯೋಗ ಸೇರಿ ಮಾಡಿರುವ ಅಕ್ರಮವಿದು. ನಾನು ಎಲ್ಲಾ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದೇನೆ, ಆದರೆ ಯಾರೂ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಫೋನ್‌ಗೆ ಲಭ್ಯವಾಗುತ್ತಿಲ್ಲ. ಇದು ಕೇವಲ ಲೂಟಿ, ಲೂಟಿ ಮತ್ತು ಲೂಟಿ! ನಾವು ಈ ಸೋಲಿನಿಂದ ಕಂಗೆಡುವುದಿಲ್ಲ, ಮತ್ತೆ ಪುಟೇಳುತ್ತೇವೆ ಎಂದು ಮಮತಾ ಹೇಳಿದ್ದಾರೆ.
ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆಯತ್ತ ಸಾಗುತ್ತಿರುವ ಹೊತ್ತಲ್ಲೇ ಮುಖ್ಯಮಂತ್ರಿಯವರಿಂದ ಇಂತಹ ಹೇಳಿಕೆ ಬಂದಿರುವುದು ಬಂಗಾಳದಲ್ಲಿ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗಿದೆ. ಬಿಜೆಪಿ ನಾಯಕರು ಈ ಆರೋಪಗಳನ್ನು ತಳ್ಳಿಹಾಕಿದ್ದು, "ಸೋಲಿನ ಹತಾಶೆಯಿಂದ ಮಮತಾ ಬ್ಯಾನರ್ಜಿ ಹತಾಶರಾಗಿದ್ದಾರೆ," ಎಂದು ಟೀಕಿಸಿದ್ದಾರೆ.
PublicNext
04/05/2026 09:45 pm