ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಸತತ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಗೆ, ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದ ಮೋಸದಾಟ ಹಾಗೂ ಕೇಂದ್ರ ಚುನಾವಣಾ ಆಯೋಗದ ಕೈವಾಡದಿಂದಾಗಿ ಮಮತಾ ಬ್ಯಾನರ್ಜಿಯವರು ಸೋತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಸ್‌ಐಆರ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ಪರವಾಗಿದ್ದ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು ಎಂದು ಆರೋಪಿಸಿದ್ದಾರೆ. ಭಾರತೀಯ ಜನತಾ ಪಕ್ಷವು ಸರ್ಕಾರಿ ಯಂತ್ರ, ತೋಳ್ಬಲ ಮತ್ತು ಹಣದ ಬಲವನ್ನು ರಾಜಾರೋಷವಾಗಿ ದುರ್ಬಳಕೆ ಮಾಡಿಕೊಂಡು ಈ ಗೆಲುವನ್ನು ಸಾಧಿಸಿದೆ ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಗೆಲುವು ನಿಜವಾದ ಅರ್ಥದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿಯೂ ಧಾರ್ಮಿಕವಾಗಿ ಮತಗಳ ಧ್ರುವೀಕರಣದ ಕುತಂತ್ರ ರಾಜಕಾರಣವನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಆದರೆ, ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರಿಗೆ ಶೀಘ್ರದಲ್ಲಿ ತಾವು ಮಾಡಿರುವ ತಪ್ಪಿನ ಅರಿವಾಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಚುನಾವಣೆಯ ಈ ಬಾರಿಯ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆಡಳಿತ ವಿರೋಧಿ ಅಲೆ ಇದ್ದರೂ, ಡಿಎಂಕೆ ಸರ್ಕಾರದ ಜನಪರ ಆಡಳಿತ ಮತ್ತು ಕಾರ್ಯಕ್ರಮಗಳನ್ನು ಅಲ್ಲಿನ ಜನ ಮೆಚ್ಚಿಕೊಂಡಿದ್ದರು. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಎಂದೂ ಸಹಿಸದ ತಮಿಳು ಮತದಾರರು ಇಂದಿನವರೆಗೆ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾ ಬಂದವರು. ಹೀಗಿದ್ದೂ, ತಮಿಳುನಾಡಿನ ಯುವಜನರು ಮತ್ತು ಮಹಿಳೆಯರಲ್ಲಿ ಸಿನಿಮಾ ನಟ ವಿಜಯ್ ಅವರ ಬಗೆಗಿನ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಡಿಎಂಕೆ ಪಕ್ಷದ ಸೋಲು, ದ್ರಾವಿಡ ಚಳುವಳಿಯ ಉಪಉತ್ಪನ್ನವಾದ ತಮಿಳುನಾಡಿನ ದ್ರಾವಿಡ ರಾಜಕೀಯಕ್ಕೆ ಆಗಿರುವ ಗಂಭೀರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಸೋಲಿನಿಂದ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ. ಇದೇ ವೇಳೆ, ಅನಿರೀಕ್ಷಿತವಾಗಿ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
PublicNext
04/05/2026 10:47 pm