ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಭಾರಿ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ಸಾಧಿಸಿದ್ದು, ಹತ್ತು ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೇರಲು ಸಿದ್ಧವಾಗಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಭಾರಿ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಿಣರಾಯಿ ವಿಜಯನ್ ತಮ್ಮ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ಸಲ್ಲಿಸಿದ್ದು, ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅದನ್ನು ಅಂಗೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಜೊತೆ ದೂರವಾಣಿ ಮಾತುಕತೆ ನಡೆಸಿದ ರಾಜ್ಯಪಾಲರು, ಮುಂದಿನ ಸರ್ಕಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಪಿಣರಾಯಿ ವಿಜಯನ್‌ಗೆ ಸೂಚನೆ ನೀಡಿದ್ದಾರೆ.
ಕೇರಳದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಸುಮಾರು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸ್ಪಷ್ಟ ಬಹುಮತ ಪಡೆದಿದೆ. ಹತ್ತು ವರ್ಷಗಳ ಎಲ್‌ಡಿಎಫ್ ಆಡಳಿತದ ನಂತರ ಕೇರಳದ ಜನರು ಈ ಬಾರಿ ಬದಲಾವಣೆಗೆ ಮತ ನೀಡಿದ್ದಾರೆ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ಯುಡಿಎಫ್‌ನ ಪ್ರಮುಖ ಗೆಲುವುಗಳಲ್ಲಿ, ದಿವಂಗತ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಪುತುಪಳ್ಳಿ ಕ್ಷೇತ್ರದಲ್ಲಿ 52,907 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದಾರೆ. ಹರಿಪಾಡ್ ಕ್ಷೇತ್ರದಲ್ಲಿ ರಮೇಶ್ ಚೆನ್ನಿತ್ತಲ ಅವರು 23,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯುಡಿಎಫ್ ಮೈತ್ರಿಕೂಟದ ಪ್ರಮುಖ ಭಾಗವಾಗಿರುವ ಮುಸ್ಲಿಂ ಲೀಗ್ ತಾನು ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 23ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಯುಡಿಎಫ್‌ನ ಗೆಲುವಿಗೆ ಪ್ರಮುಖ ಬಲ ತುಂಬಿದೆ.
PublicNext
04/05/2026 10:26 pm