ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬಂಗಾಳದ ಅಸನ್ಸೋಲ್‌ನಲ್ಲಿ ಟಿಎಂಸಿ ಟೆಂಟ್‌ಗಳನ್ನು ಧ್ವಂಸ ಮಾಡಿದ ಬಿಜೆಪಿ ಕಾರ್ಯಕರ್ತರು

ಅಸನ್ಸೋಲ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ, ರಾಜ್ಯದ ಹಲವೆಡೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಅಸನ್ಸೋಲ್‌ನ ಇಂಜಿನಿಯರಿಂಗ್ ಕಾಲೇಜ್ ಬಳಿಯ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ನಡುವೆ ಭೀಕರ ಘರ್ಷಣೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಉದ್ರಿಕ್ತ ಗುಂಪು ಟೆಂಟ್‌ಗಳ ಒಳಗಿದ್ದ ಪ್ಲಾಸ್ಟಿಕ್ ಕುರ್ಚಿಗಳನ್ನು ಗಾಳಿಯಲ್ಲಿ ತೂರುತ್ತಿರುವುದು ಮತ್ತು ಪೀಠೋಪಕರಣಗಳನ್ನು ಧ್ವಂಸ ಮಾಡುತ್ತಿರುವುದು ಕಂಡುಬಂದಿದೆ. ವಾಹನಗಳ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದ್ದು, ಸ್ಥಳದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.

ಘರ್ಷಣೆ ತಾರಕಕ್ಕೇರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಘು ಲಾಠಿ ಪ್ರಹಾರ ನಡೆಸಿದರು. ಸದ್ಯ ಅಸನ್ಸೋಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭದ್ರತಾ ಪಡೆಗಳು ಪಥಸಂಚಲನ ನಡೆಸುತ್ತಿವೆ.

ಬಂಗಾಳದ 294 ಕ್ಷೇತ್ರಗಳ ಪೈಕಿ ಬಿಜೆಪಿ ಅಚ್ಚರಿಯ ರೀತಿಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಈ ಬಾರಿ ದೊಡ್ಡ ಹಿನ್ನಡೆಯಾಗಿದೆ.ರಾಜ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ದ್ವೇಷದ ಹಿನ್ನೆಲೆಯಲ್ಲಿ, ಚುನಾವಣಾ ಫಲಿತಾಂಶದ ವೇಳೆ ಈ ಘರ್ಷಣೆಗಳು ಸಂಭವಿಸುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

"ಅಸನ್ಸೋಲ್‌ನಲ್ಲಿ ರಾಜಕೀಯ ಪಕ್ಷವೊಂದರ ಕ್ಯಾಂಪ್ ಧ್ವಂಸವಾಗಿದೆ. ಘಟನೆಗೆ ಕಾರಣರಾದವರನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗುತ್ತಿದೆ," ಎಂದು ಅಸನ್ಸೋಲ್ ದುರ್ಗಾಪುರ ಪೊಲೀಸ್ ಕಮಿಷನರ್ ಪ್ರಣವ್ ಕುಮಾರ್ ತಿಳಿಸಿದ್ದಾರೆ.

ಬಂಗಾಳದ ಇತಿಹಾಸದಲ್ಲೇ ಈ ಚುನಾವಣಾ ಫಲಿತಾಂಶವು ಅತ್ಯಂತ ಮಹತ್ವದ ಬದಲಾವಣೆಯನ್ನು ತರುವ ಮುನ್ಸೂಚನೆ ನೀಡಿದ್ದು, ಸಂಜೆಯ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬರಲಿದೆ. ಅಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದೆ.

Edited By : Nagaraj Tulugeri
PublicNext

PublicNext

04/05/2026 09:50 pm

Cinque Terre

13.3 K

Cinque Terre

0

ಸಂಬಂಧಿತ ಸುದ್ದಿ