ಹೈದರಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೇ 14ರ ಮಧ್ಯಾಹ್ನ, ಮಣಿಕೊಂಡ-ನೆಕ್ನಾಂಪುರ ಪ್ರದೇಶದ ಅಲ್ಕಾಪುರ್ ಟೌನ್‌ಶಿಪ್‌ನಲ್ಲಿರುವ ಪ್ರಣತಿ ಈಶಾ ಅಪಾರ್ಟ್‌ಮೆಂಟ್ ಬಳಿ, ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಟ್ಟೆ ಎತ್ತಿ ಯುವಕನೊಬ್ಬ ವಿಕೃತಿ ಮೆರೆದಿದ್ದಾನೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ವಿಕೃತ ಕೃತ್ಯದ ದೃಶ್ಯಾವಳಿಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಿವೆ. ಎಂದಿನಂತೆ ಜನಸಂಚಾರವಿದ್ದ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆ ಮಹಿಳೆ ತಮ್ಮ ಎಡಗೈಯಲ್ಲಿ ಪುಟ್ಟ ಮಗುವನ್ನು ಹಿಡಿದುಕೊಂಡು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಲಗೈಯಲ್ಲಿ ಛತ್ರಿ ಹಿಡಿದು ಶಾಲೆಯಿಂದ ಮನೆಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಆಕೆ ರಸ್ತೆಯಲ್ಲಿ ಸಾಗುತ್ತಿದ್ದಾಗ, ಹಿಂದಿನಿಂದ ಬಂದ ಕಿಡಿಗೇಡಿಯೊಬ್ಬ, ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಆಕೆಯ ಉಡುಪನ್ನು ಮೇಲಕ್ಕೆ ಎತ್ತಿ ತನ್ನ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾನೆ.
ಕ್ಷಣವೇ ತನಗೆ ಏನಾಯಿತು ಮತ್ತು ಆತ ಯಾರೆಂದು ತಿಳಿಯದೆ ಒಂದು ಕ್ಷಣ ಗೊಂದಲಕ್ಕೊಳಗಾದ ಆ ತಾಯಿ, ಧೈರ್ಯಗೆಡದೆ ತಕ್ಷಣವೇ ಹಿಂದಿರುಗಿ ನಿಂತಿದ್ದಾರೆ. ಇದನ್ನರಿತ ಆ ಕಿಡಿಗೇಡಿ ತಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ, ಧೈರ್ಯಶಾಲಿ ಮಹಿಳೆ ಸುಮ್ಮನಾಗದೆ, ಕೆಲವೇ ಸೆಕೆಂಡುಗಳ ಕಾಲ ರಸ್ತೆಯಲ್ಲಿ ನಿಂತು, ನಂತರ ಆತ ಓಡಿದ ದಿಕ್ಕಿನತ್ತಲೇ ಆಕ್ರೋಶದಿಂದ ಹೆಜ್ಜೆ ಹಾಕಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಇದನ್ನು ಅಸಹ್ಯಕರ ಮತ್ತು ಆಘಾತಕಾರಿ ಎಂದು ಕರೆದಿದ್ದಾರೆ. ವಸತಿ ಪ್ರದೇಶಗಳಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದ ಬೆನ್ನಲ್ಲೇ, ನರಸಿಂಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ. ಹರಿ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಸಂತ್ರಸ್ತೆ ಇನ್ನೂ ಔಪಚಾರಿಕವಾಗಿ ಪೊಲೀಸರನ್ನು ಸಂಪರ್ಕಿಸದಿದ್ದರೂ ಮತ್ತು ಆಕೆಯ ಗುರುತು ಪತ್ತೆಯಾಗದಿದ್ದರೂ, ಮಹಿಳೆಯರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಲು ಮತ್ತು ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಯುತ್ತಿದೆ.
PublicNext
20/05/2026 04:40 pm