ಮುಂಬೈ: ಅಡುಗೆ ಮಾಡದಿರುವುದು, ಮನೆಯನ್ನು ಶುಚಿಗೊಳಿಸದಿರುವುದು ಅಥವಾ ಪತಿಯ ಪೋಷಕರನ್ನು ನೋಡಿಕೊಳ್ಳದಿರುವುದನ್ನು ಮಾತ್ರ ಆಧರಿಸಿ ಪತ್ನಿಯ ವಿರುದ್ಧ 'ಕ್ರೌರ್ಯ'ದ ಆರೋಪ ಮಾಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. "ಮದುವೆ ಎಂಬುದು ಸಮಾನರ ನಡುವಿನ ಪಾಲುದಾರಿಕೆ. ಅದು ಸೇವಾ ಒಪ್ಪಂದವಲ್ಲ. ಪತ್ನಿಯರನ್ನು ಸೇವಕಿಯರಂತೆ ಕಾಣಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಖಡಾಖಂಡಿತವಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡಿದ್ದ ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ತಿಂಗಳಿಗೆ 20,000 ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿದೆ.
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪತಿಯು, ತಮ್ಮ ಪತ್ನಿ ಅಡುಗೆ ಮಾಡುತ್ತಿರಲಿಲ್ಲ, ಮನೆಕೆಲಸ ನಿರ್ವಹಿಸುತ್ತಿರಲಿಲ್ಲ ಹಾಗೂ ತಮ್ಮ ಪೋಷಕರನ್ನು ನೋಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿದ್ದರು. ಇದರಿಂದ ತಾನು ಮಾನಸಿಕ ಕ್ರೌರ್ಯ ಅನುಭವಿಸಿದ್ದೇನೆ ಎಂದು ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ, ಈ ಆರೋಪಗಳನ್ನು ಹೈಕೋರ್ಟ್ ಒಪ್ಪಲಿಲ್ಲ. ಮನೆಕೆಲಸಗಳನ್ನು ಮಾಡದಿರುವುದನ್ನೇ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ. 2002ರ ಫೆಬ್ರವರಿ 28ರಂದು ವಿವಾಹವಾಗಿದ್ದ ಈ ದಂಪತಿಗಳ ನಡುವೆ ಮದುವೆಯಾದ ಕೆಲವೇ ತಿಂಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು. ಪರಿಣಾಮವಾಗಿ, 2002ರ ಜುಲೈ 7ರಂದು ಪತ್ನಿ ಪತಿ ಮನೆಯನ್ನು ತೊರೆದು ತಮ್ಮ ಪೋಷಕರ ಮನೆಗೆ ತೆರಳಿದ್ದರು.
2004ರಲ್ಲಿ ಪತಿಯು ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದರೆ, ಪತ್ನಿಯು ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2010ರಲ್ಲಿ ಕುಟುಂಬ ನ್ಯಾಯಾಲಯವು ಪತಿಗೆ ವಿಚ್ಛೇದನ ಮಂಜೂರು ಮಾಡಿತ್ತು, ಆದರೆ ಪತ್ನಿಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಪತಿಯು, ತಮ್ಮ ಪತ್ನಿ ಅಸಭ್ಯವಾಗಿ ವರ್ತಿಸುತ್ತಿದ್ದಳು, ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದಳು ಹಾಗೂ ಪೊಲೀಸರಿಗೆ ದೂರು ನೀಡುವ ಮೂಲಕ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದಳು ಎಂದು ಹೆಚ್ಚುವರಿ ಆರೋಪಗಳನ್ನು ಮಾಡಿದ್ದರು.
ಪತ್ನಿಯು ಇದಕ್ಕೆ ಪ್ರತಿಯಾಗಿ, ಪತಿ ಮತ್ತು ಅವರ ಕುಟುಂಬದವರು ವರದಕ್ಷಿಣೆ ಹಾಗೂ ದುಬಾರಿ ಆಭರಣಕ್ಕಾಗಿ ಒತ್ತಡ ಹೇರುತ್ತಿದ್ದರು. ಸಣ್ಣ ವಿಷಯಗಳಿಗೂ ಕಿರುಕುಳ ಮತ್ತು ಅವಮಾನ ಮಾಡುತ್ತಿದ್ದರು ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಇದರ ನಡುವೆ, ಪತ್ನಿ ಕಲಾ ತರಗತಿಗಳನ್ನು ನಡೆಸುತ್ತಿರುವುದರಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ಆದ್ದರಿಂದ ಶಾಶ್ವತ ಜೀವನಾಂಶ ನೀಡಬೇಕಿಲ್ಲ ಎಂದು ಪತಿಯು ವಾದಿಸಿದ್ದರು. ಆದರೆ, ಪತಿಯ ಆದಾಯವನ್ನು ಕೇವಲ ತೆರಿಗೆ ರಿಟರ್ನ್ ಆಧರಿಸಿ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಕಾರಣ ಅವರಿಗೆ ಹೆಚ್ಚಿನ ಆದಾಯ ಗಳಿಸುವ ಸಾಮರ್ಥ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅಂತಿಮವಾಗಿ, ಪ್ರಸ್ತುತ ಹಣದುಬ್ಬರ ಮತ್ತು ಜೀವನ ವೆಚ್ಚ ಏರಿಕೆಯನ್ನು ಪರಿಗಣಿಸಿ, ಪತ್ನಿಗೆ ತಿಂಗಳಿಗೆ 20,000 ರೂಪಾಯಿ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
PublicNext
27/05/2026 02:16 pm