ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ಮಾರ್ಟ್ ಜಲ ಕ್ರಾಂತಿ: ಬೆಂಗಳೂರಿನಲ್ಲಿ ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ ವೈಭವದ ಚಾಲನೆ!

ಬೆಂಗಳೂರು: ಬೆಂಗಳೂರಿನಲ್ಲಿ ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026 ಕ್ಕೆ ವೈಭವದ ಚಾಲನೆ.. ​ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ, ನಗರೀಕರಣ ಹಾಗೂ ಅಂತರ್ಜಲ ಕುಸಿತದಂತಹ ಗಂಭೀರ ಸವಾಲುಗಳನ್ನು ಮೆಟ್ಟಿ ನಿಲ್ಲಲು ಎಐ ಆಧಾರಿತ ಹೈಟೆಕ್ ಜಲ ಆಡಳಿತಕ್ಕೆ ಮುನ್ನುಡಿ ಬರೆಯಲಾಗಿದೆ. ಬೆಂಗಳೂರು ಜಲಮಂಡಳಿ ವತಿಯಿಂದ ಎಲೈಟ್ಸ್ ಮತ್ತು ಕೆಪಿಎಂಜಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಬೃಹತ್ 'ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026' ಕಾರ್ಯಕ್ರಮವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನೀರಿನ ಒತ್ತಡ ಹೆಚ್ಚುತ್ತಿದ್ದು, ಸಾರ್ವಜನಿಕ ಸೇವೆಗಳನ್ನು ಪಾರದರ್ಶಕ ಹಾಗೂ ದಕ್ಷವಾಗಿಸಲು ತಂತ್ರಜ್ಞಾನ ಆಧಾರಿತ ಇಂಟಲಿಜೆಂಟ್ ಆಡಳಿತ ವ್ಯವಸ್ಥೆ ಇನ್ನು ಮುಂದೆ ಐಚ್ಛಿಕವಲ್ಲ, ಅದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಕರ್ನಾಟಕವು ಈಗಾಗಲೇ ಎಐ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ ನೀತಿ ಚೌಕಟ್ಟುಗಳನ್ನು ತಂದಿದ್ದು, ಇಂತಹ ತಂತ್ರಜ್ಞಾನ ಆಧಾರಿತ ನಗರ ಜಲ ಆಡಳಿತದಲ್ಲಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಅವರು ಹೆಮ್ಮೆಯಿಂದ ಪ್ರಕಟಿಸಿದರು.

ಈ ಮಹತ್ವದ ಶೃಂಗಸಭೆಯಲ್ಲಿ ಜಲಮಂಡಳಿಯ ಅತ್ಯಾಧುನಿಕ ಸಾಧನೆಗಳು ಮತ್ತು ಭವಿಷ್ಯದ ದೃಢವಾದ ರೋಡ್‌ಮ್ಯಾಪ್ ಎಲ್ಲರ ಗಮನ ಸೆಳೆಯಿತು. ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, 14 ದಶಲಕ್ಷಕ್ಕೂ ಅಧಿಕ ನಾಗರಿಕರಿಗೆ ನೀರುಣಿಸುತ್ತಿರುವ ಜಲಮಂಡಳಿಯು ಏಷ್ಯಾದ ಅತಿದೊಡ್ಡ ನಗರ-ಮಟ್ಟದ ಸ್ಕಾಡಾ (SCADA) ವ್ಯವಸ್ಥೆ, ಐಒಟಿ (IoT) ಮೇಲ್ವಿಚಾರಣೆ ಮತ್ತು ಸ್ಮಾರ್ಟ್ ಮೀಟರಿಂಗ್‌ನಂತಹ ಹೈಟೆಕ್ ತಂತ್ರಜ್ಞಾನಗಳಿಂದ ಆದಾಯ ತರದ ನೀರಿನ (NRW) ಪ್ರಮಾಣವನ್ನು ಶೇ. 50 ರಿಂದ ಶೇ. 26.5 ಕ್ಕೆ ಇಳಿಸಿದೆ ಎಂದು ಘೋಷಿಸಿದರು. ಇದರಿಂದ ಪ್ರತಿದಿನ ಬರೋಬ್ಬರಿ 200 ದಶಲಕ್ಷ ಲೀಟರ್ (200 MLD) ನೀರು ಉಳಿತಾಯವಾಗುತ್ತಿದ್ದು, ಜಲಮಂಡಳಿಯ ಎಐ-ಚಾಲಿತ ಎನರ್ಜಿ ಆಪ್ಟಿಮೈಸೆಷನ್ ಪಂಪ್‌ಗಳ ಮೂಲಕ ವಾರ್ಷಿಕ ₹42 ಕೋಟಿ ವಿದ್ಯುತ್ ವೆಚ್ಚವನ್ನು ಉಳಿಸಲಾಗುತ್ತಿದೆ. ಇದೇ ವೇಳೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂದೇಶದ ಮೂಲಕ, ಹೆಚ್ಚುತ್ತಿರುವ ಕೈಗಾರಿಕಾ ನೀರಿನ ಬೇಡಿಕೆಯನ್ನು ಸರಿದೂಗಿಸಲು ಈ ಬುದ್ಧಿವಂತ ಜಲ ವ್ಯವಸ್ಥೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಬಿಡಬ್ಲ್ಯೂಎಸ್‌ಎಸ್‌ಬಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ವಿಶೇಷವಾಗಿ ಈ ಬಾರಿಯ ಶೃಂಗಸಭೆಯಲ್ಲಿ ಜಲ ಸಂರಕ್ಷಣೆ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಜಲಮಂಡಳಿಯ ಮೂರು ಪ್ರಮುಖ ಪ್ರಸ್ತುತಿಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಈ ಪ್ರದರ್ಶನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮಳೆನೀರು ಕೊಯ್ಲು (Rainwater Harvesting) ಮಾಡುವುದು ಹೇಗೆ ಮತ್ತು ವಿಶೇಷ ನಲ್ಲಿಗಳನ್ನು (Taps) ಬಳಸಿಕೊಂಡು ದಿನನಿತ್ಯದ ಬಳಕೆಯಲ್ಲಿ ನೀರನ್ನು ಹೇಗೆ ಪರಿಣಾಮಕಾರಿಯಾಗಿ ಉಳಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಇದರೊಂದಿಗೆ, ಬತ್ತಿ ಹೋಗುತ್ತಿರುವ ಭೂಗರ್ಭದ ಒರತೆಗಳನ್ನು ಮರುಜೀವಗೊಳಿಸಲು ವೈಜ್ಞಾನಿಕವಾಗಿ ಅಂತರ್ಜಲವನ್ನು ಮರುಪೂರಣ (Underground Water Recharging) ಮಾಡುವ ಸುಲಭ ವಿಧಾನಗಳು ಹಾಗೂ ಮಾನವ ಹಸ್ತಕ್ಷೇಪವಿಲ್ಲದೆ ನೀರಿನ ಲಭ್ಯತೆಗೆ ತಕ್ಕಂತೆ ಬೋರ್‌ವೆಲ್‌ಗಳನ್ನು ತಾವಾಗಿಯೇ ಆನ್ ಮತ್ತು ಆಫ್ ಮಾಡುವ ಸ್ವಯಂಚಾಲಿತ ಬೋರ್‌ವೆಲ್ ಕಾರ್ಯಾಚರಣೆ (Automatic Borewell Operation) ವ್ಯವಸ್ಥೆಯನ್ನು ಪ್ರದರ್ಶಿಸಿ ಜಲ ಜಾಗೃತಿ ಮೂಡಿಸಲಾಯಿತು.

ಒಟ್ಟಾರೆಯಾಗಿ, ಜಾಗತಿಕ ಜಲ ತಜ್ಞರು, ಎಐ ಪರಿಣತರು ಮತ್ತು ನೀತಿ ನಿರೂಪಕರು ಭಾಗವಹಿಸಿದ್ದ ಈ ಶೃಂಗಸಭೆಯು ಬೆಂಗಳೂರನ್ನು ಕೇವಲ ಐಟಿ ರಾಜಧಾನಿಯನ್ನಾಗಿ ಮಾತ್ರವಲ್ಲದೆ, 'ಡಿಜಿಟಲ್ ಜಲ ನಿರ್ವಹಣೆಯ ಜಾಗತಿಕ ಹಬ್' ಆಗಿ ಪರಿವರ್ತಿಸುವ ದೃಢ ಸಂಕಲ್ಪಕ್ಕೆ ಸಾಕ್ಷಿಯಾಯಿತು. ತಂತ್ರಜ್ಞಾನದ ಕೃತಕ ಬುದ್ಧಿಮತ್ತೆ ಮತ್ತು ನಾಗರಿಕರ ನೈಸರ್ಗಿಕ ಜಲ ಜಾಗೃತಿ ಒಟ್ಟಿಗೆ ಸೇರಿದಾಗ ಮಾತ್ರ ಭವಿಷ್ಯದ ಪೀಳಿಗೆಗೆ ಸುಸ್ಥಿರ ಮತ್ತು ಸಮಾನ ನಗರ ಬೆಳವಣಿಗೆಯನ್ನು ಖಚಿತಪಡಿಸಲು ಸಾಧ್ಯ ಎಂಬ ಉನ್ನತ ಆಶಯದೊಂದಿಗೆ ಈ ಐತಿಹಾಸಿಕ ಶೃಂಗಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Edited By :
PublicNext

PublicNext

29/05/2026 04:10 pm

Cinque Terre

59.37 K

Cinque Terre

0

ಸಂಬಂಧಿತ ಸುದ್ದಿ