ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಪೊಲೀಸರ ಅನುಮತಿ ಇಲ್ಲದೆ ಪಣಂಬೂರಿನತ್ತ ಸಾಗಿಸಲಾಗುತ್ತಿದ್ದ ಬೃಹತ್ ಕೈಗಾರಿಕಾ ಸ್ಥಾವರಕ್ಕೆ ಸಂಚಾರ ಪೊಲೀಸರು ತಡೆಹಿಡಿದ ಪರಿಣಾಮ, ಎನ್‌ಐಟಿಕೆ ಹಿಂಭಾಗದ ಟೋಲ್ ಸಮೀಪ ಮಂಗಳವಾರ ಸ್ವಾವರವನ್ನು ನಿಲ್ಲಿಸಲಾಯಿತು.
ಬುಧವಾರ ಮತ್ತೆ ಇದರ ಸಾಗಾಟ ಮುಂದುವರಿಯುವ ಸಾಧ್ಯತೆ ಇದೆ. ಈ ಸ್ಥಾವರವನ್ನು ಪಡುಬಿದ್ರಿಯಿಂದ ಎನ್ ಎಂಪಿಎ ಬಂದರಿಗೆ ಬೃಹತ್ ಟ್ರಾಲಿ ಮೂಲಕ ಸಾಗಿಸಲಾಗುತ್ತಿದ್ದು, ಸುಮಾರು 30 ಮೀಟರ್ ಉದ್ದ ಹಾಗೂ ಗಮನಾರ್ಹ ಎತ್ತರ ಹೊಂದಿದೆ. ಅಮೆರಿಕದ ರಿಫೈನರಿಗೆ ರಫ್ತು ಮಾಡುವ ಉದ್ದೇಶದಿಂದ ಇದನ್ನು ಸಾಗಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಈ ಸ್ಥಾವರ ಎನ್‌ಐಟಿಕೆ ಪ್ರದೇಶ ತಲುಪಿತ್ತು. ಇದರ ಹಿಂದೆ ಬರುತ್ತಿದ್ದ ಮತ್ತೊಂದು ಸಣ್ಣ ಗಾತ್ರದ ಸ್ಥಾವರವನ್ನು ನಿಲ್ಲಿಸಲು ಪೊಲೀಸರು
ಸೂಚಿಸಿದ್ದರೂ ಅದು ಮುಂದುವರಿದು ಸಾಗಿದ್ದು, ಈ ವೇಳೆ ಸರಕಾರಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೃಹತ್ ಸ್ಥಾವರ ಸಾಗಾಟಕ್ಕೆ ಅಗತ್ಯ ಅನುಮತಿ ಪಡೆದು ಮಾತ್ರ ಮುಂದು ವರಿಯುವಂತೆ ಸೂಚನೆ ನೀಡಲಾಗಿದೆ. ಮಂಗಳವಾರ ರಾತ್ರಿ ಸಾಗಾಟಕ್ಕೆ ಅನುಮತಿ ದೊರೆಯುವ ಸಾಧ್ಯತೆ ಕಡಿಮೆ ಇದ್ದು, ಬುಧವಾರ ಬೆಳಿಗ್ಗೆ ಅಥವಾ ಹಗಲು ವೇಳೆಯಲ್ಲಿ ಸಾಗಾಟ ನಡೆಯಬಹುದು ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸ್ಥಾವರ ಸಾಗಾಟಕ್ಕಾಗಿ ಚೆನ್ನೈನಿಂದ ವಿಶೇಷ ಬೃಹತ್ ಟ್ರಾಲಿಯನ್ನು ತರಲಾಗಿದ್ದು, ಅದಕ್ಕೆ ಸುಮಾರು 230 ಚಕ್ರಗಳಿವೆ.
ಮಂಗಳವಾರ ರಾತ್ರಿ ಸ್ಥಾವರ ಸಾಗಾಟಕ್ಕೆ ಅವಕಾಶ ನೀಡದಿರುವುದಕ್ಕೆ ಪೊಲೀಸ್ ಸಿಬ್ಬಂದಿ ಕೊರತೆಯೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಹುತೇಕ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ಉಳ್ಳಾಲ ಪ್ರದೇಶದ ಸಂಚಾರ ಸಮಸ್ಯೆ ನಿರ್ವಹಣೆಗೆ ಸಮೀಪದ ಎಲ್ಲ ವಾರಕ್ಕೆ ಎರಡು ದಿನ ತಲಾ ಆರು ಸಿಬ್ಬಂದಿಯನ್ನು ನಿಯೋಜಿಸುವಂತೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಗಳಲ್ಲಿ ಸಿಬ್ಬಂದಿ ಅಭಾವ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆರೋಪವೂ ಕೇಳಿಬಂದಿದೆ. ಸಂಚಾರ ಉತ್ತರ ಠಾಣೆಯಿಂದ ಮಂಗಳವಾರ ಹಾಗೂ ಶುಕ್ರವಾರ ತಲಾ ಆರು ಮಂದಿ ಸಿಬ್ಬಂದಿಯನ್ನು ಉಳ್ಳಾಲಕ್ಕೆ ಕಳುಹಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿ ಬಲ ಹೆಚ್ಚಿಸುವಂತೆ ಪೊಲೀಸ್ ಆಯುಕ್ತರು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಮಂಜೂರಾಗುವ ನಿರೀಕ್ಷೆಯಿದೆ. ಅಲ್ಲದೆ, ಪ್ರಸ್ತುತ ಡೆಕ್ಕನ್ ಪಾಕ್ ವ್ಯಾಪ್ತಿಯಲ್ಲಿರುವ ಬಜಪೆ ವಿಮಾನ ನಿಲ್ದಾಣ ಪ್ರದೇಶಕ್ಕೆ ಪ್ರತ್ಯೇಕ ಸಂಚಾರ ಠಾಣೆ ಮಂಜೂರು ಮಾಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Kshetra Samachara
03/06/2026 03:37 pm