ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಹುಟ್ಟುಹಬ್ಬದ ಸಂಭ್ರಮದಲ್ಲೇ ಪತ್ನಿ ಕೊಲೆ: ಬಳ್ಳಾರಿಯಲ್ಲಿ ಅಘಾತಕಾರಿ ಘಟನೆ!

ಬಳ್ಳಾರಿ: ಪತ್ನಿಯ ಹುಟ್ಟುಹಬ್ಬದ ಸಂಭ್ರಮದ ನೆಪದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಆಫ್ರೀನ್ ಬಾನು ಎಂದು ಗುರುತಿಸಲಾಗಿದೆ. ಈ ಕೃತ್ಯ ಎಸಗಿದ ಪತಿ ನೂರ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿಸಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಎಂಟು ತಿಂಗಳ ಗಂಡು ಮಗುವಿದೆ. ಇತ್ತೀಚೆಗೆ ಪತಿ-ಪತ್ನಿಯರ ನಡುವೆ ಆಗಾಗ ಜಗಳವಾಗುತ್ತಿದ್ದರಿಂದ ಆಫ್ರೀನ್ ಬಾನು ತನ್ನ ತವರು ಮನೆಗೆ ತೆರಳಿದ್ದರು.

ಮೇ 21ರಂದು ಆಫ್ರೀನ್ ಬಾನು ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಪತಿ ನೂರ್ ಅಹ್ಮದ್ ಆಕೆಗೆ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿದ್ದ. ಪತಿಯ ಮಾತು ನಂಬಿದ ಆಫ್ರೀನ್, ಅಡುಗೆ ಮಾಡಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅಂದೇ ಸಂಜೆ ಪಾರ್ಟಿ ಕೊಡಿಸುವ ನೆಪದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋದ ನೂರ್ ಅಹ್ಮದ್, ನಂತರ ಆಕೆಯನ್ನು ಮನೆಗೆ ಕರೆತರಲಿಲ್ಲ. ಆಫ್ರೀನ್ ನಾಪತ್ತೆಯಾದಾಗ ಆಕೆಯ ಕುಟುಂಬಸ್ಥರು ಆತಂಕಗೊಂಡು ನೂರ್ ಅಹ್ಮದ್‌ಗೆ ಕರೆ ಮಾಡಿದಾಗ, "ನನಗೇನೂ ಗೊತ್ತಿಲ್ಲ, ನಾವೆಲ್ಲರೂ ಸೇರಿ ಹುಡುಕೋಣ" ಎಂದು ಆತ ನಾಟಕವಾಡಿದ್ದ.

ನಂತರ ನಡೆದ ತನಿಖೆಯ ವೇಳೆ, ಆರೋಪಿ ನೂರ್ ಅಹ್ಮದ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕುಡತಿನಿ ಸಮೀಪದ ನಿರ್ಜನ ಪ್ರದೇಶದಲ್ಲಿ ಆಫ್ರೀನ್ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಮೃತದೇಹವನ್ನು ತನ್ನ ಬೈಕ್‌ನಲ್ಲಿ ಸಾಗಿಸಿ ಎಸೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಘಟನೆ ನಡೆದ 13 ದಿನಗಳ ನಂತರ ಮೃತದೇಹ ಪತ್ತೆಯಾಗಿದ್ದು, ಈಗಾಗಲೇ ಕೊಳೆತ ಸ್ಥಿತಿಯಲ್ಲಿದೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನೂರ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Edited By :
PublicNext

PublicNext

03/06/2026 05:11 pm

Cinque Terre

7.21 K

Cinque Terre

0

ಸಂಬಂಧಿತ ಸುದ್ದಿ