ಬಳ್ಳಾರಿ : ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಗಂಡ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಆಫ್ರೀನ್ ಬಾನು ಕೊಲೆಯಾದ ಮಹಿಳೆ. ನೂರ್ ಅಹ್ಮದ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ..
ಆಫ್ರೀನ್ ಬಾನು ಹಾಗೂ ನೂರ್ ಅಹ್ಮದ್ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ ಎಂಟು ತಿಂಗಳ ಮುದ್ದಾದ ಗಂಡು ಮಗು ಇದೆ. ಇಬ್ಬರ ಮಧ್ಯೆ ಇತ್ತೀಚೆಗೆ ಕೌಟುಂಬಿಕ ಕಲಹ ಶುರುವಾಗಿದ್ದರಿಂದ ಆಫ್ರೀನ್ ಬಾನು ತವರು ಮನೆ ಸೇರಿದ್ದಳು.
ಇದೇ ಮೇ 21 ರಂದು ನೂರ್ ಅಹ್ಮದ್ ಹುಟ್ಟುಹಬ್ಬ ಹಿನ್ನೆಲೆ ಪತ್ನಿ ಆಫ್ರೀನ್ ಬಾನುಗೆ ಕರೆ ಮಾಡಿ, ಮನೆಗೆ ಬರುತ್ತೇನೆ ಅಲ್ಲೇ ಹುಟ್ಟುಹಬ್ಬ ಆಚರಣೆ ಮಾಡೋಣ ಎಂದು ಹೇಳಿದ್ದ. ಗಂಡ ಬರುತ್ತಾನೆ ಎನ್ನುವ ಖುಷಿಯಲ್ಲಿ ಆಫ್ರೀನ್ ಬಾನು ಒಳ್ಳೆಯ ಅಡುಗೆ ಮಾಡಿ, ಗಂಡನಿಗೆ ಊಟ ಮಾಡಿಸಿ, ಕೇಕ್ ಕಟ್ ಮಾಡಿಸಿದ್ದಳು.
ಅದೇ ದಿನ ಸಂಜೆ ಪಾರ್ಟಿ ಕೊಡಿಸುತ್ತೇನೆ ಹೊರಗಡೆ ಹೋಗೋಣ ಬಾ ಎಂದು ನೂರ್ ಅಹ್ಮದ್ ತನ್ನ ಪತ್ನಿ ಆಫ್ರೀನ್ ಬಾನುಳನ್ನ ಕರೆದುಕೊಂಡು ಹೋಗಿದ್ದ. ಆದರೂ ರಾತ್ರಿಯಾದ್ರೂ ಮನೆಗೆ ವಾಪಸ್ ಆಗದೇ ಇದ್ದಾಗ ಆಫ್ರೀನ್ ಬಾನು ಕುಟುಂಬಸ್ಥರು ಆತಂಕಗೊಂಡಿದ್ದರು.
ಆಗ ನೂರ್ ಅಹ್ಮದ್ ನಂಬರ್ ಗೆ ಕರೆ ಮಾಡಿ ಕೇಳಿದರೆ ನನಗೇನೂ ಗೊತ್ತಿಲ್ಲ, ಎಲ್ಲರೂ ಸೇರಿ ಹುಡುಕೋಣ ಎಂದು ನಾಟಕ ಆಡಿದ್ದ. ಆದರೆ ಅಷ್ಟರಲ್ಲಾಗಲೇ ಆಫ್ರೀನ್ ಬಾನುಳನ್ನ ಕೊಲೆ ಮಾಡಿ, ಕುಡತಿನಿ ಸಮೀಪದ ನಿರ್ಜನ ಪ್ರದೇಶವೊಂದರಲ್ಲಿ ಶವ ಬಿಸಾಡಿ ಬಂದಿದ್ದ.
ಶವ ಬಿಸಾಕಿದ್ದ ಸ್ಥಳದಿಂದ 10 ಕಿಲೋಮೀಟರ್ ದೂರದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಆ ಬಳಿಕ ತನ್ನದೇ ಬೈಕ್‌ನಲ್ಲಿ ಶವ ತಂದು ಬಿಸಾಕಿದ್ದ. ಕೊನೆಗೆ ಏನೂ ಆಗಿಲ್ಲ ಎನ್ನುವಂತೆ ಮನೆಗೆ ಬಂದು ಆಫ್ರೀನ್‌ಳನ್ನು ಹುಡುಕಾಡುವ ನಾಟಕ ಮಾಡಿದ್ದ. ಇನ್ನು ಆಫ್ರೀನ್ ಕುಟುಂಬಸ್ಥರು ನೂರ್ ಅಹ್ಮದ್ ಮೇಲೆ ಅನುಮಾನಗೊಂಡು ದೂರು ಕೊಟ್ಟಿದ್ದರು.
ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದ. ಕೊಲೆ ಮಾಡಿ 13 ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದರಿಂದ ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನೂರ್ ಅಹ್ಮದ್ ನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
PublicNext
03/06/2026 08:50 pm