ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಬ್ಯಾಂಕ್ ಉದ್ಯೋಗಿನಿ ನಿಗೂಢ ಸಾವು : ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆ - ಸಾವಿನ ಸುತ್ತ ಅನುಮಾನದ ಹುತ್ತ.!

ಬಳ್ಳಾರಿ: ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಪಾರ್ಟಿಗೆ ತೆರಳಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬಳ್ಳಾರಿಯ ಅಂದ್ರಾಳ ಹಳ್ಳದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೃತ ಮಹಿಳೆಯನ್ನು ಬಳ್ಳಾರಿಯ ಕೌಲ್ ಬಜಾರ್ ನಿವಾಸಿ, 38 ವರ್ಷದ ಅನಿಷಾ ಫಾತೀಮಾ ಎಂದು ಗುರುತಿಸಲಾಗಿದೆ. ಅವರು ಪ್ರಗತಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು.

ಶನಿವಾರ (ಜೂನ್ 6) ರಾತ್ರಿ ಅನಿಷಾ ಫಾತೀಮಾ ಅವರು ಬ್ಯಾಂಕ್ ಸಿಬ್ಬಂದಿಯೊಂದಿಗೆ ಪಾರ್ಟಿಗೆ ಹೋಗಿದ್ದರು. ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಪತಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಂತರ ಅನಿಷಾ ಫಾತೀಮಾ ಅವರ ಸಂಪರ್ಕ ಕಡಿತಗೊಂಡಿತ್ತು.

ಭಾನುವಾರ ಬೆಳಗ್ಗೆ, ಅಂದ್ರಾಳ ಹಳ್ಳದ ಪಕ್ಕದ ಜಾಲಿ ಬೇಲಿಯ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅಂದ್ರಾಳ ಹಳ್ಳ ತುಂಬಿ ಹರಿಯುತ್ತಿತ್ತು. ಹೀಗಾಗಿ, ನೀರಿನ ರಭಸಕ್ಕೆ ಅನಿಷಾ ಸ್ಕೂಟಿ ಸಮೇತ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಸ್ಕೂಟಿ ಒಂದು ಕಡೆ ಮತ್ತು ಮೃತದೇಹ ಮತ್ತೊಂದು ಕಡೆ ಪತ್ತೆಯಾಗಿದೆ. "ನಮ್ಮ ಮನೆ ಹೆಣ್ಣು ಮಗಳಿಗೆ ಆದ ತೊಂದರೆ ಇನ್ನೊಬ್ಬರಿಗೆ ಆಗಬಾರದು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು" ಎಂದು ಮೃತ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ.

Edited By :
PublicNext

PublicNext

07/06/2026 07:59 pm

Cinque Terre

9.34 K

Cinque Terre

1

ಸಂಬಂಧಿತ ಸುದ್ದಿ