ಚಿತ್ರದುರ್ಗ: ಹೀಗೆ ಮುಖ್ಯ ಕಾಲುವೆಗೆ ಮಣ್ಣು ಸುರಿದು ಕಾಲುವೆ ಬಂದ್ ಮಾಡಿ ಕಿಡಿ ಕಾರುತ್ತಿರೋ ರೈತರು. ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟಿಸುತ್ತಿರೋ ಅನ್ನದಾತರು. ಹನಿ ನೀರಾವರಿ ಸ್ಕೀಂ ಜಾರಿಗೆ ಪಟ್ಟು ಹಿಡಿದಿರೋ ಸಾರ್ವಜನಿಕರು. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬರದನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಹಳ್ಳಿ. ಹೌದು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಚಿತ್ರದುರ್ಗ ಜಿಲ್ಲೆಯ ಅನ್ನದಾತರು ಹತ್ತಾರು ದಶಕಗಳಿಂದ ಹೋರಾಟ ಮಾಡ್ತಿದ್ದಾರೆ. ಆದ್ರೆ ಬರದ ನಾಡಿಗೆ ಭದ್ರೆ ಮಾತ್ರ ಹರಿದು ಬರ್ತಿಲ್ಲ. ಈ ನಡುವೆ ಹೊಳಲ್ಕೆರೆ ತಾಲ್ಲೂಕಿನ ರೈತರಿಗೆ ಹೊಸದೊಂದು ಸಮಸ್ಯೆ ಎದುರಾಗಿದೆ.
ಹೇಳಿ ಕೇಳಿ ಹೊಳಲ್ಕೆರೆ ಭಾಗದಲ್ಲಿ ಅಡಿಕೆ ಬೆಳೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆದ್ರೆ ಅಪ್ಪರ್ ಭದ್ರಾ ಸ್ಕೀಂನಲ್ಲಿ ಕೇವಲ 0.25 TMC ನೀರು ಹಂಚಿಕೆ ಮಾಡಲಾಗಿದೆ. ಈ ಮೂಲಕ ತಾಲ್ಲೂಕಿನ ಕೆರೆಗಳ ಭರ್ತಿಗೆ ಯೋಜನೆ ರೂಪಿಸಿದ್ದಾರೆ. ಆದ್ರೆ ಇದೇ ಯೋಜನೆಯಲ್ಲಿ ಸುಮಾರು 8 ಕೆರೆಗಳನ್ನ ಕೈಬಿಡಲಾಗಿದ್ದು, ಈ ಭಾಗದ ರೈತರಿಗೆ ಅನ್ಯಾಯ ಮಾಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ನಡುವೆ ರಾಜ್ಯ ಸರ್ಕಾರ ಕೆ.ಸಿ. ರೆಡ್ಡಿ ಆಯೋಗದ ವರದಿ ಜಾರಿಗೆ ಮುಂದಾಗಿದ್ದು, ಇದು ಹೊಳಲ್ಕೆರೆ ಭಾಗದ ಅನ್ನದಾತರ ಪಾಲಿಗೆ ಮರಣ ಶಾಸನವಾಗಲಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದರಿಂದ ಇಡೀ ಹೊಳಲ್ಕೆರೆ ಭಾಗವನ್ನ ಹನಿ ನೀರಾವರಿ ಯೋಜನೆಯಿಂದ ಕೈಬಿಡಲಾಗಿದ್ದು, ಸರ್ಕಾರದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ....
ಇನ್ನೂ ಚನ್ನಗಿರಿ, ಹೊಸದುರ್ಗ, ಅಜ್ಜಂಪುರ, ಕಡೂರು, ಹಿರಿಯೂರು ಸೇರಿ ಒಟ್ಟು ಎಂಟು ತಾಲ್ಲೂಕುಗಳಿಗೆ ಹನಿ ನೀರಾವರಿ ಯೋಜನೆ ವಿಸ್ತರಣೆ ಮಾಡಲಾಗಿದೆ. ಆದ್ರೆ ಹೊಳಲ್ಕೆರೆ ತಾಲ್ಲೂಕು ಕೈಬಿಡಲಾಗಿದ್ದು, ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಆರೋಪಿಸಿ, ಬೊಮ್ಮನಹಳ್ಳಿ ಸಮೀಪ ಮುಖ್ಯ ಕಾಲುವೆಗೆ ಮಣ್ಣು ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಮುಖ್ಯ ಕಾಲುವೆ ಮೇಲ್ಭಾಗದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಹನಿ ನೀರಾವರಿ ಯೋಜನೆ ಜಾರಿಗೆ ರೈತರು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಬರದನಾಡಿಗೆ ಭದ್ರೆ ಹರಿಯುವ ಮುನ್ನವೇ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ರೈತರಿಗೆ ತಾರತಮ್ಯ ಮಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇನ್ನಾದ್ರೂ ರಾಜ್ಯ ಸರ್ಕಾರ ಈ ಭಾಗದ ಜನರ ನೋವಿಗೆ ಸ್ಪಂದಿಸಿ, ಕೂಡಲೇ ಹನಿ ನೀರಾವರಿ ಯೋಜನೆ ವಿಸ್ತರಣೆ ಮಾಡಿ, ಕೆರೆಗಳು ಭರ್ತಿ ಮಾಡಲಿ ಅನ್ನೋದು ರೈತ ಸಮುದಾಯದ ಒತ್ತಾಯವಾಗಿದೆ....
PublicNext
10/06/2026 11:04 am