ಶಿರಸಿ: ಬೆಟ್ಟ ಬಳಕೆದಾರರ ಹಕ್ಕನ್ನು ಎಂದಿಗೂ ಬಿಟ್ಟುಕೊಡುವ ಮಾತೇ ಇಲ್ಲ. ಪರಿಸರವನ್ನು ಉಳಿಸಿ ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ ತಲೆಮಾರುಗಳಿಂದ ಬೆಟ್ಟದ ಜಮೀನನ್ನು ನಂಬಿ ಬದುಕುತ್ತಿರುವ ರೈತರ ಹಿತರಕ್ಷಣೆಯೂ ಅಷ್ಟೇ ಮುಖ್ಯ. ಭಾಗಾಯತ ಜಮೀನಿಗೆ ಹೊಂದಿಕೊಂಡಿರುವ 'ಬೆಟ್ಟ ಬ ಖರಾಬ್' ಜಾಗದ ವಿಷಯದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ನಗರದ ಶಾಲ್ಮಲಾ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಮತ್ತು ಗ್ರಾಮ ಅರಣ್ಯ ಸಮಿತಿಗಳ (VFC) ಲಾಭಾಂಶ ಹಂಚಿಕೆ" ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ತೋಟಗಳ ಸುತ್ತಮುತ್ತನಲ್ಲಿ ಪಾರಂಪರಿಕ ಹಣ್ಣು ಹಂಪಲ ನೀಡುವ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಕಾಡನ್ನು ಉಳಿಸಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಅಲ್ಲದೆ ಭಾಗಾಯತ ಜಮೀನುಗಳಿಗೆ ಹೊಂದಿಕೊಂಡಿರುವ ಸರ್ಕಾರಿ 'ಬೆಟ್ಟ ಬ ಖರಾಬ್' ಜಮೀನುಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಗೊಂದಲಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಲೆನಾಡು ಮತ್ತು ಕರಾವಳಿ ಭಾಗದ ರೈತರಿಗೆ ಭಾಗಾಯತ ಜಮೀನುಗಳಷ್ಟೇ ಬೆಟ್ಟದ ಜಮೀನುಗಳೂ ಮುಖ್ಯವಾಗಿವೆ. ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಬೆಟ್ಟದ ಹಕ್ಕನ್ನು ಬಳಸಿಕೊಂಡು ಬರಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಕೆಲವು ನಿಯಮಾವಳಿಗಳು ರೈತರಿಗೆ ತೊಂದರೆ ನೀಡುವಂತಿರಬಾರದು. ಬೆಟ್ಟ ಬಳಕೆದಾರರಾದ ನಾವು ಯಾವುದೇ ಕಾರಣಕ್ಕೂ ನಮ್ಮ ಸಾಂಪ್ರದಾಯಿಕ ಹಕ್ಕನ್ನು ಹಾಗೂ ಬೆಟ್ಟದ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಎಂದು ಶಾಸಕರು ಸರ್ಕಾರ ಹಾಗೂ ಇಲಾಖೆಯ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮ ಅರಣ್ಯ ಸಮಿತಿಗಳ (VFC) ಸದಸ್ಯರಿಗೆ ನಿಯಮಾನುಸಾರ ಲಾಭಾಂಶವನ್ನು ಹಂಚಿಕೆ ಮಾಡಲಾಯಿತು. ಕಾಡು ಬೆಳೆಸುವಲ್ಲಿ ಶ್ರಮಿಸಿದ ಸ್ಥಳೀಯ ಸಮಿತಿಗಳ ಕಾರ್ಯವನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಡಿಸಿಎಫ್ ಸಂದೀಪ್ ಸೂರ್ಯವಂಶಿ, ಪರಿಸರ ತಜ್ಞ ಶಿವಾನಂದ ಕಳವೆ, ಎ.ಸಿ.ಎಫ್ ಗಳಾದ ಎಸ್ ಎಸ್ ನಿಂಗಾಣಿ, ಸಿಎನ್ ಹರೀಶ್, ಆರ್ ಎಫ್ ಓ ಗಳಾದ ಗಿರೀಶ್ ನಾಯ್ಕ್, ಶಿವಾನಂದ್ ನಿಂಗಾಣಿ, ಅಜಯ್ ಕುಮಾರ್, ಶ್ರೀಮತಿ ಉಷಾ ಕಬ್ಬೆರ , ಶ್ರೀಮತಿ ರೋಮನ್ ಶೇಕ್, ಮತ್ತು ರೋಟರಿ ಅಧ್ಯಕ್ಷ ಶ್ರೀನಿವಾಸ್ ನಾಯ್ಕ್, ಎಸ್ ಎನ್ ಹೊಸಮನಿ, ಶ್ರೀ ಮಾರಿಕಾಂಬ ದೇವಸ್ಥಾನದ ಧರ್ಮದರ್ಶಿ ವಿನಾಯಕ್ ಶೇಟ್ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮ ಅರಣ್ಯ ಸಮಿತಿಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
Kshetra Samachara
15/06/2026 05:15 pm