ಶಿರಸಿ: ಶ್ರೀ ಮಠದ ಅಂಗ ಸಂಸ್ಥೆಯಾದ ಬೆಂಗಳೂರಿನ ಶ್ರೀ ಸ್ವಾನಂದಾಶ್ರಮದ ಗಣೇಶ ಸಂಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೊಯ್ಸಳ ಶೈಲಿಯ ಭವ್ಯ ದೇವಾಲಯದ ಪ್ರಥಮ ಹಂತದ ಲೋಕಾರ್ಪಣೆಯನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮಿಗಳು ನೆರವೇರಿಸಿದರು.
ಈ ಮಹೋತ್ಸವದ ಪ್ರಯುಕ್ತ ಶ್ರೀ ಏಕಾಕ್ಷರ ಮಹಾಗಣಪತಿ ಅಷ್ಟಬಂಧ ಪ್ರತಿಷ್ಠಾಪನೆ, ಮುದ್ಗಲ ಪುರಾಣೋಕ್ತ 32 ಗಣಪತಿಗಳು ಹಾಗೂ ಗಣೇಶ ಪುರಾಣದಲ್ಲಿ ಉಲ್ಲೇಖಗೊಂಡಿರುವ 4 ಯುಗ ಗಣಪತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ಜರುಗಿದವು.
ಬೆಳಗ್ಗೆ ಕರ್ಕ ಲಗ್ನದ ಶುಭ ಮುಹೂರ್ತದಲ್ಲಿ ವೇದಘೋಷ, ಮಂತ್ರೋಚ್ಚಾರಣೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಮಧ್ಯೆ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀಗುರುಗಳ ಶಿಷ್ಯರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ರಚಿಸಿದ ಗಣಪತಿಯ ಸ್ತುತಿಸುವ ಅದ್ಭುತ ಶ್ಲೋಕಗಳನ್ನು ಸಮರ್ಪಿಸಿದರು.
ಬಳಿಕ ಆಶ್ರಮದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತಿ, ಧರ್ಮ ಹಾಗೂ ಭಾರತೀಯ ಶಿಲ್ಪಕಲೆಯ ಮಹತ್ವವನ್ನು ವಿವರಿಸಿದರು. ಹೊಯ್ಸಳ ಶೈಲಿಯ ಈ ದೇವಾಲಯವು ಸಮಾಜಕ್ಕೆ ಶಾಂತಿ, ಸೌಹಾರ್ದ ಹಾಗೂ ಆಧ್ಯಾತ್ಮಿಕ ಚೈತನ್ಯವನ್ನು ನೀಡುವ ಕೇಂದ್ರವಾಗಲಿ ಎಂದು ಹಾರೈಸಿದ ಅವರು, ಎಲ್ಲರೂ ದೇವಸ್ಥಾನಗಳಿಗೆ ಹೋಗುವ ಹಾಗೆ ಆಗಲಿ. ವಿಶೇಷವಾಗಿ ಇಂದಿನ ಮಕ್ಕಳಿಗೆ ತಮ್ಮ ಪಾಲಕರು ದೇವಸ್ಥಾನಗಳನ್ನು ತೋರಿಸಿ ಚಿಕ್ಕಂದಿನಿಂದಲೇ ದೇವರ ಮೇಲೆ ಶ್ರದ್ಧಾ ಭಕ್ತಿಗಳು ಜಾಗೃತವಾಗುವ ಹಾಗೆ ಮಾಡಿ ಎಂದು ನುಡಿದರು.
ಗಣೇಶ ವಿಗ್ರಹ ನಿರ್ಮಾಣ ಮಾಡುವ ಶಿಲ್ಪಿಗಳಿಗೆ ಈ ದೇವಾಲಯ ಮಾದರಿಯಾಗುವಂತಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶೀರ್ವಚನ ನೀಡಿದರು.
ಮೈಸೂರಿನ ಭಾರತೀಯ ಯೋಗಧಾಮದ ಅಧ್ಯಕ್ಷ ಡಾ. ಕೆ.ಎಲ್. ಶಂಕರನಾರಾಯಣ ಜೋಯಿಸ್ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
19/06/2026 02:57 pm