ಶಿರಸಿ:ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಉತ್ತೇಜಿಸಬೇಕು ಎಂದು ನೀಲೇಕಣಿ ಸರ್ಕಾರಿ ಪಿಯು ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿಗಳಾದ ಉಮೇಶ್ ನಾಯ್ಕ್ ತಿಳಿಸಿದರು.
ಅವರು ಗುರುವಾರ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶಿರಸಿ, ಚಂದನ ಆಂಗ್ಲ ಮಾಧ್ಯಮ ಶಾಲೆ, ನರೇಬೈಲ್, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಬೆಂಗಳೂರು, ಕದಂಬ ಕನ್ನಡ ಸೇನೆ ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗೂ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ತಾಲೂಕಿನ ನರೇಬೈಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ನಾನು ವಿಜ್ಞಾನಿ – 2025 ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪಶಸ್ತಿ ಪತ್ರ ವಿತರಣಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪೋಷಕರು ಮತ್ತು ಶಿಕ್ಷಕರು ಮಕ್ಕಳ ಪ್ರಶ್ನಿಸುವ ಮನೋಭಾವವನ್ನು ಉತ್ತೇಜಿಸಬೇಕು. ಮಕ್ಕಳು ಕೂಡ ಕುತೂಹಲ ಬೆಳೆಸಿಕೊಳ್ಳಬೇಕು ಹಾಗೂ ಹೊಸ ಹೊಸ ವಿಚಾರಗಳ ಬಗ್ಗೆ ಆಸಕ್ತಿ ವಹಿಸಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನವೀನ್ ಬಿ. ಶೆಟ್ಟಿ ಅವರು, “ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಪ್ರತಿಭೆ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ಅವರು ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿಯೂ ಸಾಧನೆ ಮಾಡಬಲ್ಲರು. ಟೆಲಿಸ್ಕೋಪ್ ತಯಾರಿಕಾ ಕಾರ್ಯಗಾರದಲ್ಲಿ ಭಾಗವಹಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆಗೆ ಪಾತ್ರರಾದ ಈ ವಿದ್ಯಾರ್ಥಿಗಳ ಸಾಧನೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಹೆಮ್ಮೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ, ಸಂಶೋಧನಾ ಮನೋಭಾವ ಮತ್ತು ಆತ್ಮವಿಶ್ವಾಸ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಕೊನೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ನಾನು ವಿಜ್ಞಾನಿ – 2025” ಟೆಲಿಸ್ಕೋಪ್ ತಯಾರಿಕಾ ಕಾರ್ಯಗಾರದಲ್ಲಿ ಭಾಗವಹಿಸಿ ಸಾಧನೆಗೈದ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪಶಸ್ತಿ ಪತ್ರವನ್ನು ಗಣ್ಯರಿಂದ ವಿತರಣೆ ಮಾಡಲಾಯಿತು.
ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಎಲ್.ಎಂ. ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ವೇಳೆ ನಾಗರಾಜ್ ಕಮನಹಳ್ಳಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸತೀಶ್ ಎಸ್ ನಾಯ್ಕ್ , ಶ್ರೀಮತಿ ವಿದ್ಯಾ ನಾಯ್ಕ್, ಶ್ರೀ ಪ್ರವೀಣ್ ನಾಯ್ಕ್, ಶ್ರೀಮತಿ ಅನುಸೂಯ ಹೆಗಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
18/06/2026 08:09 pm