ಶಿಗ್ಗಾವಿ : ಭೂಮಿ ಸಾಗುವಳಿ ಮಾಡುತ್ತಿರುವ ಬಡ ರೈತನ ಮೇಲೆ ದುಂಡಶಿ ವಲಯ ಅರಣ್ಯ ಅಧಿಕಾರಿಗಳು ಏಕಾಏಕಿ ದೌರ್ಜನ್ಯ ಎಸಗಿರುವ ಘಟನೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾವಿ ತಾಲೂಕಾ ಘಟಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಆನಂದ ಕೆಳಗಿನಮನಿ ಮಾತನಾಡಿ, ತಾಲೂಕಿನ ಕೋಣನಕೇರಿ ಶುಗರ್‌ಫ್ಯಾಕ್ಟರಿ ಹತ್ತಿರವಿರುವ ಜಮೀನಿನಲ್ಲಿ ಶಿವಪುರ ಗ್ರಾಮದ ಈರಪ್ಪ ಸೋಮಪ್ಪ ಲಮಾಣಿ ಎಂಬ ರೈತರ ಕುಟುಂಬ ೩ ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದೆ.
ಅಷ್ಟೇ ಅಲ್ಲದೆ ೧೯೯೪ರಲ್ಲಿ ಕೆಲ ರೈತರಿಗೆ ಸಾಗುವಳಿ ಪತ್ರವನ್ನು ಸಹ ನೀಡಲಾಗಿದ್ದು, ಅದರಂತೆಯೇ ಈ ರೈತರು ಸಾಗುವಳಿ ಮುಂದುವರಿಸಿದ್ದಾರೆ. ಆದರೆ, ವಾರದ ಹಿಂದೆ ರೈತ ಈರಪ್ಪ ಲಮಾಣಿ ಅವರು ಗೋವಿನಜೋಳ ಬಿತ್ತನೆ ಮಾಡುತ್ತಿದ್ದಾಗ ದುಂಡಶಿ ವಲಯದ ಅರಣ್ಯ ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಬಂದು ರೈತನನ್ನು ತಡೆದಿದ್ದಾರೆ. ಇಲ್ಲೇಕೆ ಉಳುಮೆ ಮಾಡುತ್ತೀಯಾ? ಎಂದು ತಕರಾರು ತೆಗೆದು ಬಂಕಾಪುರ ಪೊಲೀಸರ ಸಹಯೋಗದೊಂದಿಗೆ ರೈತನನ್ನು ಏಕಾಏಕಿ ಎಳೆದಾಡಿ, ಹೊಲದಿಂದ ಹೊರಗೆ ಹಾಕುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘಟನೆಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ತಲೆಮಾರುಗಳಿಂದ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ತಕ್ಷಣವೇ ಹಕ್ಕುಪತ್ರ ಮಾಡಿಕೊಡಬೇಕು. ಇದೇ ರೀತಿ ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದರೆ ಇನ್ಮು ಮುಂದೆ ರೈತ ಸಂಘವು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಹಾವೇರಿ ಜಿಲ್ಲಾಧ್ಯಕ್ಷ ಅನಿಲ್ ಡೊಳ್ಳಿನ, ರಾಜ್ಯ ಸಂಚಾಲಕರು ಬಸವರಾಜ್ ತಳವಾರ, ಗಿರಧರಗೌಡ ಪಾಟೀಲ, ಭೀಮಪ್ಪ ಗೊಟಗೋಡಿ, ವೀರಪ್ಪ ಲಮಾಣಿ, ರಾಮಪ್ಪ ಲಮಾಣಿ, ಶಾಂತವ ಲಮಾಣಿ ಇತರರಿದ್ದರು.
ವರದಿ. ಚನ್ನವೀರ ನೀರಲಗಿ. ಪಬ್ಲಿಕ್ ನೆಕ್ಸ್ಟ್ ಶಿಗ್ಗಾವಿ
Kshetra Samachara
18/06/2026 03:26 pm
LOADING...