ಹೊಸಪೇಟೆ : ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರು ಕಾಳಜಿವಹಿಸಬೇಕು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ತಾಯಿ ಮತ್ತು ಶಿಶು ಮರಣಗಳ ಪ್ರಮಾಣವನ್ನು ಶೂನ್ಯಕ್ಕೆ ತರಲು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತಾಯಿ ಮರಣ ಮತ್ತು ಶಿಶು ಮರಣ ಕುರಿತ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 9 ತಾಯಿ ಮರಣ ಮತ್ತು 3 ಶಿಶು ಮರಣ ಸಂಭವಿಸಿವೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಬಹುದು.
ಆದ್ದರಿಂದ ಪ್ರತಿಯೊಬ್ಬ ವೈದ್ಯಾಧಿಕಾರಿಯೂ ಕರ್ತವ್ಯದ ಅವಧಿಯಲ್ಲಿ ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳಬೇಕು. ರೋಗಿಗಳಿಗೆ ಯಾವುದೇ ಚಿಕಿತ್ಸೆ ಅಥವಾ ಚುಚ್ಚುಮದ್ದು ನೀಡುವ ಮುನ್ನ ಔಷಧೀಯ ಗುಣಮಟ್ಟ ಹಾಗೂ ಮುಖ್ಯವಾಗಿ ಎಕ್ಸ್ಪೈರಿ ದಿನಾಂಕವನ್ನು ಪ್ರತಿಯೊಂದನ್ನೂ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ಆಸ್ಪತ್ರೆಗೆ ಬರುವ ರೋಗಿಗಳ, ವಿಶೇಷವಾಗಿ ಗರ್ಭಿಣಿಯರ ಆರೋಗ್ಯದ ಸ್ಥಿತಿಗತಿಯನ್ನು ತಕ್ಷಣವೇ ಅರಿತು ತ್ವರಿತವಾಗಿ ಚಿಕಿತ್ಸೆ ಆರಂಭಿಸಬೇಕು. ಸ್ಥಳೀಯವಾಗಿ ಚಿಕಿತ್ಸೆ ನೀಡುವುದು ಅಸಾಧ್ಯವೆನಿಸಿದರೆ, ತಕ್ಷಣವೇ ಉನ್ನತ ಮಟ್ಟದ ಆಸ್ಪತ್ರೆಗೆ ಕೊಂಡೊಯ್ಯುವಂತೆ ಶಿಫಾರಸ್ಸು ಮಾಡಬೇಕು.
ಹೆರಿಗೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಯಾವುದೇ ರೀತಿಯ ಆಲಸ್ಯ, ನಿರ್ಲಕ್ಷ್ಯ ವಹಿಸದೆ, ಲಭ್ಯವಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಬಳಸಿಕೊಂಡು ಜೀವ ಉಳಿಸುವ ಕೆಲಸವಾಗಬೇಕು. ಕೇವಲ ವೈದ್ಯರಷ್ಟೇ ಅಲ್ಲದೆ, ಚಿಕಿತ್ಸೆ ಅರಸಿ ಬರುವ ರೋಗಿಗಳು ಮತ್ತು ಅವರ ಕುಟುಂಬದವರು ಸಹ ವೈದ್ಯಾಧಿಕಾರಿಗಳು ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು, ಪೌಷ್ಟಿಕ ಆಹಾರ ಸೇವನೆ ಮತ್ತು ವೈದ್ಯರು ಸೂಚಿಸಿದ ನಿಯಮ ಪಾಲಿಸುವುದೂ ಅಷ್ಟೇ ಮುಖ್ಯ. ಆರೋಗ್ಯದ ವಿಷಯದಲ್ಲಿ ಸಾರ್ವಜನಿಕರು ಆಲಸ್ಯ ತೋರಿದಲ್ಲಿ ಅಥವಾ ರೋಗದ ಲಕ್ಷಣಗಳ ಮುಚ್ಚಿಟ್ಟಲ್ಲಿ ಸಾವು-ನೋವುಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ಒಳಗೊಂಡಿರಬೇಕು. ಆಂಬುಲೆನ್ಸ್ ಸೇವೆಗಳು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದ ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂಗಳು ತಳಮಟ್ಟದಲ್ಲಿ ಗರ್ಭಿಣಿಯರ ನೋಂದಣಿ ಹಾಗೂ ಹೈ-ರಿಸ್ಕ್ ಗರ್ಭಿಣಿಯರನ್ನು ಗುರುತಿಸಿ ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸಬೇಕು.
ಪ್ರತಿಯೊಂದು ಜೀವವೂ ಅಮೂಲ್ಯ. ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಚಿಕಿತ್ಸೆ ಸಿಗಬೇಕು. ಇದರಲ್ಲಿ ಯಾವುದೇ ಲೋಪ ದೋಷಗಳಾದರೆ ಸಂಬಂಧಪಟ್ಟ ವೈದ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ಇತರೇ ಸಿಬ್ಬಂದಿ ಹಾಜರಿದ್ದರು.
Kshetra Samachara
19/06/2026 07:26 pm