ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳದಲ್ಲಿ ಫುಟ್‌ಪಾತ್‌ಗಳೇ ಪಾರ್ಕಿಂಗ್ ತಾಣ; ಜೀವ ಕೈಯಲ್ಲಿ ಹಿಡಿದು ರಸ್ತೆಗಿಳಿಯುವಂತಾದ ಪಾದಚಾರಿಗಳು!

ಕಾರ್ಕಳ: ಕಾರ್ಕಳ ತಾಲೂಕಿನ ಪ್ರಮುಖ ರಸ್ತೆಗಳ ಬದಿಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಫುಟ್‌ಪಾತ್‌ಗಳು ಸಾರ್ವಜನಿಕರ ನಡಿಗೆಗೆ ಸಿಗುತ್ತಿಲ್ಲ! ಬದಲಾಗಿ ಇವು ವಾಹನಗಳ ಅಕ್ರಮ ಪಾರ್ಕಿಂಗ್ ತಾಣಗಳಾಗಿ ಮಾರ್ಪಟ್ಟಿದ್ದು, ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರು ದಿನನಿತ್ಯ ಕಿರಿಕಿರಿಯಲ್ಲೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಈ ಗಂಭೀರ ಸಮಸ್ಯೆಯ ವಿರುದ್ಧ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಸ್ಥಳೀಯ ಪುರಸಭೆ ಹಾಗೂ ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ.

​ಪಟ್ಟಣದ ಬಹುತೇಕ ವಾಣಿಜ್ಯ ಸಂಕೀರ್ಣಗಳು ಮತ್ತು ಅಂಗಡಿ ಮುಂಗಟ್ಟುಗಳ ಮುಂಭಾಗದ ಕಾಲುದಾರಿಗಳನ್ನು ಬೈಕ್ ಹಾಗೂ ಸ್ಕೂಟರ್‌ ಸವಾರರು ಬೇಕಾಬಿಟ್ಟಿ ಪಾರ್ಕ್ ಮಾಡುತ್ತಿದ್ದಾರೆ.

"ನಮಗೂ ಪಟ್ಟಣದಲ್ಲಿ ಬೇರೆಲ್ಲೂ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅನಿವಾರ್ಯ ಕಾರಣಗಳಿಂದಲೇ ವಾಹನಗಳನ್ನು ಫುಟ್‌ಪಾತ್ ಮೇಲೆ ನಿಲ್ಲಿಸಬೇಕಾಗಿದೆ" ಎಂಬುದು ವಾಹನ ಸವಾರರ ಅಳಲಾಗಿದೆ.

​ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿ

ಶಾಲಾ-ಕಾಲೇಜು ಆರಂಭವಾಗುವ ಮತ್ತು ಬಿಡುವ ಅವಧಿಯಲ್ಲಂತೂ ಪಾದಚಾರಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿರುತ್ತದೆ. ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ವೃದ್ಧರು ಅನಿವಾರ್ಯವಾಗಿ ವಾಹನ ದಟ್ಟಣೆ ಇರುವ ಮುಖ್ಯ ರಸ್ತೆಗೇ ಇಳಿದು ನಡೆಯಬೇಕಾದ ಪರಿಸ್ಥಿತಿ ಇದೆ. ಅತಿ ವೇಗವಾಗಿ ಬರುವ ಬಸ್, ಕಾರುಗಳ ನಡುವೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದ್ದು, ಸಣ್ಣ ಮುನ್ನೆಚ್ಚರಿಕೆ ತಪ್ಪಿದರೂ ದೊಡ್ಡ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದು ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಇಲಾಖೆ ಹಾಗೂ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ವಹಿಸಬೇಕು. ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದರ ಜೊತೆಗೆ, ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ: ಮಂಜು ಶೆಟ್ಟಿ ಸಾಣೂರು, ಪಬ್ಲಿಕ್ ನೆಕ್ಸ್ಟ್ ಕಾರ್ಕಳ

Edited By : Shivu K
PublicNext

PublicNext

20/06/2026 07:24 pm

Cinque Terre

6.91 K

Cinque Terre

0

ಸಂಬಂಧಿತ ಸುದ್ದಿ