ಮಂಗಳೂರು: ಎಂಆರ್‌ಪಿಎಲ್‌ಗೆ ಹೊಸದಾಗಿ ಸೇರುವ ಕಾರ್ಮಿಕರಿಗೆ ದಾಖಲೆಗಳೇ ಇಲ್ಲದೆ ನಕಲಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ನೀಡಿರುವ ಗಂಭೀರ ಆರೋಪದಡಿ, ಎಂಆರ್‌ಪಿಎಲ್ ಉದ್ಯೋಗಿ ಸೇರಿದಂತೆ ಇಬ್ಬರು ದಲ್ಲಾಳಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಬಜ್ಪೆ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.
ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಎಂಆರ್‌ಪಿಎಲ್ ಉದ್ಯೋಗಿ ಹಾಗೂ ದಲ್ಲಾಳಿ ಮಮತಾ ಮತ್ತು ಮತ್ತೋರ್ವ ದಲ್ಲಾಳಿ ಭರತ್ ಎಕ್ಕಾರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಕಲಿ ಪಿಸಿಸಿ ತಯಾರಿಸಿ ಇಲಾಖೆಗೆ ವಂಚನೆ ಮಾಡಿದ ಆರೋಪದಲ್ಲಿ ಬಜ್ಪೆ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಆಶಾ ಹಾಗೂ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಎಚ್.ಎನ್. ಅವರು 2024ರ ಫೆಬ್ರವರಿ 17ರಂದು ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಪೊಲೀಸ್ ಐಟಿಯಲ್ಲಿನ ವೆರಿಫಿಕೇಷನ್ ರಿಜಿಸ್ಟರ್ ಪರಿಶೀಲಿಸುತ್ತಿದ್ದರು. ಆಗ ಠಾಣೆಗೆ ಸ್ವೀಕೃತವಾಗಿದ್ದ 33 ಪಿಸಿಸಿ ಅರ್ಜಿಗಳ ಪೈಕಿ 31 ಅರ್ಜಿಗಳನ್ನು ರಿಜಿಸ್ಟರ್‌ನಲ್ಲಿ ನಮೂದಿಸದೆ ನೇರವಾಗಿ ಶಿಫಾರಸ್ಸು ಮಾಡಿರುವುದು ಬೆಳಕಿಗೆ ಬಂದಿದೆ. ಕೇವಲ 2 ಅರ್ಜಿಗಳನ್ನು ಮಾತ್ರ ಅಧಿಕೃತವಾಗಿ ನಮೂದಿಸಲಾಗಿತ್ತು.
ಈ ಅಕ್ರಮದ ಬಗ್ಗೆ ಸಂಶಯಗೊಂಡ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಪಿಸಿಸಿ ಅರ್ಜಿದಾರರಲ್ಲಿ ಒಬ್ಬರಾದ ಶಿವರಾಜ್ ತಳವಾರ ಎಂಬುವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಶಿವರಾಜ್, ತನ್ನ ಆಧಾರ್ ಕಾರ್ಡ್ ಮತ್ತು ವಾಸ್ತವ್ಯದ ಕರಾರು ಪತ್ರಗಳನ್ನು ಕಾಟಿಪಳ್ಳ-ಕೈಕಂಬದ ಎಂಆರ್‌ಪಿಎಲ್‌ನಲ್ಲಿ ಕೆಲಸ ಮಾಡುವ ಮಮತಾ ಎಂಬುವರಿಗೆ ನೀಡಿದ್ದರು. ಅವರು ಅದನ್ನು ಎಕ್ಕಾರಿನ ಭರತ್ ಎಂಬುವರಿಗೆ ನೀಡಿದ್ದು, ಅವರ ಮೂಲಕವೇ ತನಗೆ ಪಿಸಿಸಿ ಮಾಡಿಕೊಡಲಾಗಿದೆ. ತಾನು ಯಾವುದೇ ವಿಚಾರಣೆಗಾಗಿ ಬಜ್ಪೆ ಪೊಲೀಸ್ ಠಾಣೆಗೆ ಹಾಜರಾಗಿಲ್ಲ ಎಂದು ಶಿವರಾಜ್ ತಿಳಿಸಿದ್ದಾರೆ.
ಪೊಲೀಸ್ ಐಟಿ ಪರಿಶೀಲಿಸಿದಾಗ, ಯಾವುದೇ ವಿಚಾರಣೆ ನಡೆಸದೆ, ಸಾಕ್ಷಿದಾರರನ್ನು ವಿಚಾರಿಸದೆ ಅಥವಾ ಹೇಳಿಕೆ ಪಡೆಯದೆ ಪಿಸಿಸಿ ಅರ್ಜಿಗಳನ್ನು ಸಿದ್ಧಪಡಿಸಿರುವುದು ಕಂಡುಬಂದಿದೆ. ಪೊಲೀಸ್ ನಿರೀಕ್ಷಕರ ಕೆಜಿಐಡಿ ನಂಬರ್ ಮತ್ತು ಠಾಣಾ ಪಾಸ್‌ವರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು, ಪೊಲೀಸ್ ಐಟಿಯಲ್ಲಿ ಲಾಗಿನ್ ಆಗಿ, 'ಪಿಎಸ್ ವೆರಿಫೈ ಆಫ್' ವಿಭಾಗದಲ್ಲಿ ಯಾವುದೇ ದಾಖಲೆಗಳನ್ನು ನಮೂದಿಸದೆ ನಕಲಿ ಪಿಸಿಸಿಗಳನ್ನು ತಯಾರಿಸಿ ಇಲಾಖೆಗೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಸಂಬಂಧ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಎಚ್.ಎನ್. ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ, ಅಕ್ರಮವಾಗಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗಳನ್ನು ತಯಾರಿಸಿರುವುದು ದೃಢಪಟ್ಟಿದೆ. ಪೊಲೀಸರು ದಲ್ಲಾಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅಮಾನತುಗೊಂಡಿರುವ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Kshetra Samachara
20/06/2026 08:57 pm