ಕಡಬ: ತಾಲೂಕಿನ ಆಲಂಕಾರು ಕಜೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ದಂಪತಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಆಲಂಕಾರು ಸಮೀಪದ ಕಜೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಹೆತ್ತವರನ್ನು ಕಳೆದುಕೊಂಡ ದಂಪತಿಯ 2 ವರ್ಷದ ಮಗು ಇದೀಗ ಅನಾಥವಾಗಿದೆ.
ಬಜಗೋಳಿ ಮೂಲದ ದಿನೇಶ್ ಹಾಗೂ ಸಿದ್ಧಕಟ್ಟೆ ನಿವಾಸಿ ಸಂಗೀತಾ ಮೃತಪಟ್ಟ ದಂಪತಿ. ಪತಿ ಮೊದಲಿಗೆ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ದಿನೇಶ್ ಎಂಬವರು ತಮ್ಮ ಪತ್ನಿ ಸಂಗೀತಾ ಹಾಗೂ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಕಜೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ದಂಪತಿಯ ನಡುವೆ ಕಲಹ ನಡೆಯುತ್ತಿತ್ತು. ಸುಮಾರು ಒಂದು ತಿಂಗಳ ಹಿಂದೆ ಮನೆ ಬಿಟ್ಟಿದ್ದ ಅವರು ಶುಕ್ರವಾರ ಸಂಜೆ ಮತ್ತೆ ಮನೆಗೆ ಬಂದಿದ್ದರು ಎನ್ನಲಾಗಿದೆ.
ಶನಿವಾರ ಬೆಳಗ್ಗೆ ಮನೆಯಿಂದ ಯಾವುದೇ ಚಲನವಲನ ಕಾಣಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯೊಳಗೆ ಸಂಗೀತಾ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರೆ, ದಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ತಂದೆ - ತಾಯಿ ಮೃತದೇಹದ ಬಳಿಯಲ್ಲಿ ಅಳುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬುರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ. ಪತಿ ಮತ್ತು ಪತ್ನಿ ಮೃತ ಘಟನೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಎರಡು ವರ್ಷದ ಮಗು ಅನಾಥವಾಗಿರುವುದು ಸಾರ್ವಜನಿಕರ ಮನಕಲಕುವಂತೆ ಮಾಡಿದೆ.
PublicNext
20/06/2026 07:48 pm