ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ ಕಾರ್ಯಕ್ರಮವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆಯಿತು. ಹಲವು ವರ್ಷಗಳ ಹಿಂದೆ ಮೃತಪಟ್ಟ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿವಾಹವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.
ಬದುಕಿರುವ ವ್ಯಕ್ತಿಗಳಿಗೆ ಯಾವ ರೀತಿಯಲ್ಲಿ ಮದುವೆ ಕಾರ್ಯ ನಡೆಯುತ್ತದೆಯೋ ಅದೇ ರೀತಿ ಪ್ರೇತಾತ್ಮ ಜೀವಗಳಿಗೂ ಮದುವೆ ಕಾರ್ಯ ನಡೆಸಲಾಯಿತು. ಈ ಪ್ರೇತ ವಿವಾಹ ಮಾಡಲು ಮುಖ್ಯ ಕಾರಣ ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಸಂತಾನ ಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಿದ್ದವು. ಕುಟುಂಬದ ಕಷ್ಟಗಳಿಗೆ ಕಾರಣವೇನು ಎಂದು ಅರಿಯಲು ಜ್ಯೋತಿಷಿಗಳ ಸಲಹೆಯಂತೆ 'ಪ್ರಶ್ನಾ ಚಿಂತನೆ' ನಡೆಸಲಾಯಿತು.
ಈ ಪ್ರಕ್ರಿಯೆಯಲ್ಲಿ, ಮೃತಪಟ್ಟ ಆನಂದರವರಿಗೆ ವಿವಾಹವಾಗದೆ ಆ ಆತ್ಮ ಅತೃಪ್ತವಾಗಿದೆ. ಇದರಿಂದಾಗಿ ಕುಟುಂಬದಲ್ಲಿ ಇಂತಹ ಹಲವು ದೋಷಗಳು ಕಂಡು ಬರುತ್ತಿದೆ ಎಂದು ತಿಳಿದು ಬಂದಿತ್ತು ಅದರಂತೆ ಈ ಆತ್ಮಕ್ಕೆ ಮದುವೆ ಮಾಡಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಜ್ಯೋತಿಷ್ಯರು ತಿಳಿಸಿದ್ದರು. ಈ ದೋಷವನ್ನು ಪರಿಹರಿಸಿ, ಮೃತ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು ಹಾಗೂ ಕುಟುಂಬದ ಸುಕ್ಷೇಮಕ್ಕಾಗಿ ಹಿರಿಯರು ಮತ್ತು ಕುಟುಂಬಸ್ಥರು ಈ ವಿವಾಹವನ್ನು ಜರುಗಿಸಲು ನಿರ್ಧರಿಸಿದರು. ಅದರಂತೆ ಆನಂದರವರ ಕುಟುಂಬದಲ್ಲೇ ಸೋದರ ಸಂಬಂಧದಲ್ಲಿ ಮಾವನ ಮಗಳು ಸರೋಜಾ ಅವರೊಂದಿಗೆ ಆನಂದರವರ ವಿವಾಹವನ್ನು ಮಾಡಲಾಯಿತು. ಆನಂದ ಎಂಬವರು ಬಾರಿಕೆ ದಿ.ತಿಮ್ಮಪ್ಪ ಮತ್ತು ಗಿರಿಜಾರವರ ಪುತ್ರರಾಗಿದ್ದು ಚಿಕ್ಕ ಪ್ರಾಯದಲ್ಲೇ ನಿಧನರಾಗಿದ್ದರು.
ಅದೇ ರೀತಿ ಸರೋಜರವರು ಮುಂಡೂರು ಬದಿಯಡ್ಕ ದಿ.ಮುತ್ತಪ್ಪ ಮತ್ತು ದೇವಕಿಯವರ ಪುತ್ರಿಯಾಗಿದ್ದು ಇವರೂ ಕೂಡಾ ಎಳವೆಯಲ್ಲೇ ನಿಧನ ಹೊಂದಿದ್ದರು. ಇಬ್ಬರೂ ನಿಧನಹೊಂದಿ ಸುಮಾರು 25 ವರ್ಷಗಳ ಕಳೆದಿವೆ. ಈ ಎರಡೂ ಆತ್ಮಗಳಿಗೂ ವಿವಾಹದ ಮುಕ್ತಿ ಕೊಡುವ ಮೂಲಕ ಅವರಿಬ್ಬರ ಕುಟುಂಬದಲ್ಲೂ ಕಂಡು ಬರುತ್ತಿದ್ದ ದೋಷಗಳಿಗೆ ಮುಕ್ತಿ ನೀಡಲಾಯಿತು. ನಮ್ಮ ಪೂರ್ವಜರು ನಮಗೆ ನೀಡಿರುವ ಸಂಸ್ಕಾರ ಮತ್ತು ಆಚರಣೆಗಳು ಕೇವಲ ಮೌಡ್ಯವಲ್ಲ, ಅವುಗಳ ಹಿಂದೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸತ್ಯಗಳಿವೆ.
ಜ್ಯೋತಿಷ್ಯದ ಮೂಲಕ ಕಂಡುಬಂದ ದೋಷವನ್ನು ಶಾಸ್ತ್ರೋಕ್ತವಾಗಿ ಪರಿಹರಿಸುವ ಮೂಲಕ ನಮ್ಮ ಕುಟುಂಬಕ್ಕೆ ನೆಮ್ಮದಿ. ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ನಮ್ಮದು, ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವಿವಾಹದ ಬಳಿಕ ನೆಂಟರಿಷ್ಟರಿಗೆ ಮದುವೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
PublicNext
24/06/2026 07:11 pm