ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮವಾಗಿ ಕೆರೆ ಮಣ್ಣು ಸಾಗಾಟ ಮಾಡುತ್ತಿದ್ದ ಟಿಪ್ಪರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ಗುರುವಾರ ಚಳ್ಳಕೆರೆ ನಗರದಲ್ಲಿ ನಡೆದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹೊಳಲ್ಕೆರೆ ತಾಲೂಕಿನ ಶಿವಗಂಗ ಕೆರೆಯಿಂದ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮಕ್ಕೆ ಬೃಹತ್ ಟಿಪ್ಪರ್‌ಗಳ ಮೂಲಕ ಮಣ್ಣು ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಚಳ್ಳಕೆರೆ ಪೊಲೀಸರು ದಾಳಿ ನಡೆಸಿ ವಾಹನಗಳನ್ನು ಪರಿಶೀಲಿಸಿದಾಗ, ಯಾವುದೇ ಮಾನ್ಯ ಪರವಾನಗಿ ಇಲ್ಲದೆ ಮಣ್ಣು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳಿಂದ ಐದು ಬೃಹತ್ ಟಿಪ್ಪರ್‌ಗಳ ಮೂಲಕ ಪ್ರತಿದಿನ ಎರಡು ಟ್ರಿಪ್‌ಗಳಂತೆ ಮಣ್ಣು ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಅಕ್ರಮವಾಗಿ ಕೆರೆಗಳಿಂದ ಮಣ್ಣು ತೆಗೆಯುವುದರಿಂದ ಜಲಮೂಲಗಳು ಹಾಗೂ ಪ್ರಕೃತಿ ಸಂಪತ್ತಿಗೆ ಹಾನಿಯಾಗುವುದಲ್ಲದೆ, ಸರ್ಕಾರಕ್ಕೆ ಬರಬೇಕಾದ ರಾಜಸ್ವ ಆದಾಯವೂ ನಷ್ಟವಾಗುತ್ತದೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಕೆರೆ ಹಾಗೂ ಸರ್ಕಾರಿ ಜಮೀನುಗಳಿಂದ ಮಣ್ಣು ತೆಗೆಯಲು ಸಂಬಂಧಪಟ್ಟ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಮಣ್ಣು ತೆಗೆಯುವ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆಯುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಾಗಿದೆ. ಆದರೆ, ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈಗಲಾದರೂ ಸಂಬಂಧ ಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಕಾನೂನು ಕ್ರಮ ಜರುಗಿಸುವರೆ ಎಂದು ಕಾದು ನೋಡಬೇಕಿದೆ.
PublicNext
23/07/2026 06:05 pm
LOADING...