ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹೆಸರಿನಲ್ಲಿ ಅಧಿಕಾರಿಗಳೇ ಕೋಟಿ ಕೋಟಿ ರೂಪಾಯಿ ಹಣ ಗುಳುಂ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಈ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಲಾಗಿದೆ.
2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದ ವೇಳೆ ಸರ್ಕಾರ ತುರ್ತು ಕುಡಿಯುವ ನೀರಿಗಾಗಿ 7 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಜೆಜೆಎಂ (JJM) ಕಾಮಗಾರಿ ಹೆಸರಿನಲ್ಲಿ ಕೋಟಿ ಕೋಟಿ ಹಣ ನುಂಗಿದ್ದಾರೆ ಎಂದು ವಕೀಲ ಓಬಳಪ್ಪ ಗಂಭೀರ ಆರೋಪ ಮಾಡಿದ್ದಾರೆ. ಜಲ ಜೀವನ್ ಮಿಷನ್ ಕಾಮಗಾರಿ ನಡೆದ ಜಾಗದಲ್ಲೇ ತುರ್ತು ಕುಡಿಯುವ ನೀರಿನ ಕಾಮಗಾರಿ ಮಾಡಿದ್ದೇವೆ ಎಂದು ಹಳೆಯ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಅನುದಾನ ಡ್ರಾ ಮಾಡಿಕೊಂಡು ಗೋಲ್‌ಮಾಲ್ ಮಾಡಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳಲ್ಲೂ ಈ ಭ್ರಷ್ಟಾಚಾರ ನಡೆದಿದ್ದರೂ, ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಅಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸಿಇಒ ಸೋಮಶೇಖರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸವನಗೌಡ ಪಾಟೀಲ್ ಸೇರಿದಂತೆ ಹಲವು ಇಂಜಿನಿಯರ್‌ಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ವಕೀಲ ಓಬಳಪ್ಪ ಅವರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
PublicNext
28/07/2026 08:05 pm
LOADING...