ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ ಈ ಬಾರಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಎರಡು ದಿನಗಳ ಕಾಲ ನಡೆದ ಹುಂಡಿ ಎಣಿಕೆಯಲ್ಲಿ ಸುಮಾರು ₹2.64 ಕೋಟಿ ಸಂಗ್ರಹವಾಗಿದ್ದು, ನಂಜುಂಡ ಮತ್ತೆ ಕೋಟ್ಯಾಧಿಪತಿಯಾಗಿದ್ದಾನೆ.
ಅಯೋಧ್ಯೆ ಶ್ರೀರಾಮ ಮಂದಿರ ಸೇರಿದಂತೆ ದೇಶದ ವಿವಿಧ ದೇವಾಲಯಗಳಲ್ಲಿ ಹುಂಡಿ ಕಳ್ಳತನ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಈ ಬಾರಿ ಎಣಿಕೆ ಕಾರ್ಯವನ್ನು ಬಿಗಿ ಭದ್ರತೆಯಲ್ಲಿ ನಡೆಸಲಾಯಿತು. ಕರ್ನಾಟಕ ಸರ್ಕಾರದ ಹೊಸ ಆದೇಶದಂತೆ ಹೊರಗಿನವರನ್ನು ಬಳಸದೆ, ದೇವಾಲಯದ ಅಧಿಕೃತ ಸಿಬ್ಬಂದಿ, ಬ್ಯಾಂಕ್ ನೌಕರರು ಮತ್ತು ಹೋಂ ಗಾರ್ಡ್‌ಗಳ ನೆರವಿನೊಂದಿಗೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಎಣಿಕೆ ನಡೆಸಲಾಯಿತು. ಇದುವರೆಗೆ ಒಂದೇ ದಿನದಲ್ಲಿ ಮುಗಿಸುತ್ತಿದ್ದ ಎಣಿಕೆ ಈ ಬಾರಿ ಬುಧವಾರದಿಂದ ಗುರುವಾರದವರೆಗೆ 2 ದಿನ ನಡೆಯಿತು.
ಒಟ್ಟು ₹2,64,29,610 ನಗದು, 97 ಗ್ರಾಂ 700 ಮಿಲಿ ಗ್ರಾಂ ಚಿನ್ನ, 2 ಕೆಜಿ 660 ಗ್ರಾಂ ಬೆಳ್ಳಿ, ವಿದೇಶಿ ಕರೆನ್ಸಿ ಮತ್ತು ₹2,000 ಮುಖಬೆಲೆಯ ನೋಟುಗಳು ಕೂಡ ಪತ್ತೆಯಾಗಿವೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಅವರ ನೇತೃತ್ವದಲ್ಲಿ ಇಡೀ ಪ್ರಕ್ರಿಯೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.
PublicNext
24/07/2026 11:12 am
LOADING...