ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹದೇವಪುರ–ಓಬಯ್ಯನ ಹಟ್ಟಿ ರಸ್ತೆ ಅಪಘಾತಕ್ಕೆ ಆಹ್ವಾನ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಚಳ್ಳಕೆರೆ: ತಾಲೂಕಿನ ನಾಯಕನಹಟ್ಟಿ ಹೋಬಳಿ ಸಮೀಪದ ಮಹದೇವಪುರದಿಂದ ಓಬಯ್ಯನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುವಂತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ನಾಲ್ಕು ಅಡಿ ಅಗಲದಂತಿರುವ ರಸ್ತೆಯಲ್ಲಿ ಪ್ರತಿನಿತ್ಯ ಆಟೋ, ಬಸ್, ಟೆಂಪೋ, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳು ಸಂಚರಿಸುತ್ತಿದ್ದು, ರಸ್ತೆ ಬದಿಯ ಜಾಲಿಮರಗಳ ಕೊಂಬೆಗಳು ದಾರಿಗೆ ಚಾಚಿಕೊಂಡಿವೆ. ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ರೈತರು ಜೀವಭಯದಲ್ಲೇ ಸಂಚರಿಸುವಂತಾಗಿದೆ.

ಮಲ್ಲೂರಹಳ್ಳಿ, ದಾಸರಮುತ್ತೇನಹಳ್ಳಿ, ಮುಷ್ಟಲಗುಮ್ಮಿ, ಮೊಳಕಾಲ್ಮೂರು, ನಾಯಕನಹಟ್ಟಿ, ತಳಕು, ಚಳ್ಳಕೆರೆ ಹಾಗೂ ಜಗಳೂರು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಈಗಾಗಲೇ ಎರಡು ಅನಾಹುತಗಳು ಸಂಭವಿಸಿದ್ದು, ಹೊರ ಊರುಗಳಿಂದ ಬಂದ ಹಲವು ವಾಹನ ಸವಾರರು ಗುಂಡಿಗಳಿಗೆ ಬಿದ್ದು ತೊಂದರೆ ಅನುಭವಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ದುರಸ್ತಿ ಹಾಗೂ ಜಾಲಿಮರಗಳ ತೆರವು ಕುರಿತು ಗ್ರಾಮ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಸಮಸ್ಯೆ ಬಗೆಹರಿದಿಲ್ಲ. ಸ್ಥಳೀಯ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಮೌನ ಮುರಿದು ತುರ್ತಾಗಿ ರಸ್ತೆ ದುರಸ್ತಿ, ಗುಂಡಿ ಮುಚ್ಚುವಿಕೆ ಹಾಗೂ ರಸ್ತೆ ಬದಿಯ ಮರಗಳ ತೆರವು ಕಾರ್ಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Edited By : Somashekar
PublicNext

PublicNext

26/07/2026 04:05 pm

Cinque Terre

9.81 K

Cinque Terre

0

ಸಂಬಂಧಿತ ಸುದ್ದಿ