ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ಮರೆಯಾಗುತ್ತಿರುವ ಮಲೆನಾಡ ಸಿರಿಯ ನಡುವೆ ಜೀವ ತಳೆದ ಕೆಸರುಗದ್ದೆ ಸಂಭ್ರಮ!

ಕಳಸ: ಆಷಾಢ-ಶ್ರಾವಣದ ಸಾಲು ಸಾಲು ಮಳೆ ಬೀಳುತ್ತಿದ್ದಂತೆ ಹಸಿರು ಹೊದ್ದು ನಿಲ್ಲುತ್ತಿದ್ದ ಮಲೆನಾಡಿನ ಗದ್ದೆಗಳು, ರೈತರ ಜಾನಪದ ನಾದ ಈಗ ಇತಿಹಾಸದ ಪುಟ ಸೇರುವ ಸ್ಥಿತಿಗೆ ತಲುಪಿದೆ. ಯಾಂತ್ರೀಕರಣದ ಹಾವಳಿ, ಕೃಷಿ ಕಾರ್ಮಿಕರ ಕೊರತೆ, ಮಳೆಯ ಕಣ್ಣಾಮುಚ್ಚಾಲೆ ಹಾಗೂ ವಾಣಿಜ್ಯ ಬೆಳೆಗಳತ್ತ ರೈತರು ಒಲವು ತೋರುತ್ತಿರುವುದರಿಂದ ಸಾಂಪ್ರದಾಯಿಕ 'ಗದ್ದೆನಟಿ' ಹಾಗೂ ಕೃಷಿ ಕಾಯಕ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಕೃಷಿಯ ಶ್ರಮ ಮರೆಯಲು ಆಡುತ್ತಿದ್ದ ಕೆಸರುಗದ್ದೆಯ ಆಟಗಳು ಕೂಡ ಮಾಸಿಹೋಗುವ ಆತಂಕ ಮೂಡಿದೆ. ಈ ಅಪರೂಪದ ಗ್ರಾಮೀಣ ಸೊಗಡನ್ನು ಮರುಜೀವಗೊಳಿಸುವ ನಿಟ್ಟಿನಲ್ಲಿ ಕಳಸದ 'ಶ್ರೀ ಬಿಂದು ಮಾಧವ ಸ್ಥಾನಿಕ ಶಿವ ಬ್ರಾಹ್ಮಣ ಸಂಘ' ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಕೂಟದಲ್ಲಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟದಂತಹ ಪಾರಂಪರಿಕ ಆಟಗಳು ಕಳಸದ ಮಣ್ಣಿನಲ್ಲಿ ಹೊಸ ಸಂಚಲನ ಸೃಷ್ಟಿಸಿದವು. ಕೆಸರಿನ ಗದ್ದೆಯಲ್ಲಿ ಮಹಿಳೆಯರು, ಯುವಕ-ಯುವತಿಯರು ಹಾಗೂ ಪುಟಾಣಿ ಮಕ್ಕಳು ಬಿದ್ದು ಎದ್ದು ಕುಣಿದಾಡಿ ಸಂಭ್ರಮಿಸಿದ ದೃಶ್ಯ ಮನಸೂರೆಗೊಂಡಿತು.

ಕೇವಲ ಕ್ರೀಡೆಯಷ್ಟೇ ಅಲ್ಲದೆ, ನೆನಪಿನಂಗಳದಲ್ಲಿದ್ದ ಮಲೆನಾಡಿನ ಹಳೆಯ ಸಾಂಪ್ರದಾಯಿಕ ಅಡುಗೆ ಹಾಗೂ ವೈವಿಧ್ಯಮಯ ತಿಂಡಿ-ತಿನಿಸುಗಳು ಭಾಗವಹಿಸಿದ್ದ ಪ್ರತಿಯೊಬ್ಬರ ನಾಲಗೆಗೂ ಸವಿ ನೀಡಿದವು. ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಮತ್ತು ಗದ್ದೆನಟಿಯಂತಹ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಇಂತಹ ವಿಶಿಷ್ಟ ಪ್ರಯತ್ನಗಳು ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದು, ಮಲೆನಾಡಿನ ಸಂಸ್ಕೃತಿ ಉಳಿವಿಗಾಗಿ ದಾರಿದೀಪವಾಗಿ ಮೂಡಿಬಂದಿವೆ.

Edited By : Somashekar
PublicNext

PublicNext

29/07/2026 01:12 pm

Cinque Terre

7.2 K

Cinque Terre

0

ಸಂಬಂಧಿತ ಸುದ್ದಿ