ತುಮಕೂರು
ಗ್ರಾಮ ಪಂಚಾಯಿತಿ ಚುನಾವಣೆಯ ಸದಸ್ಯ ಸ್ಥಾನಗಳ ಮೀಸಲಾತಿ ಹಂಚಿಕೆಯಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡದೆ ಸಾರ್ವಜನಿಕರ ಗಮನಕ್ಕೆ ತಂದು, ಪಂಚಾಯಿತಿ ಅಧಿಕಾರಿಗಳಿಂದ ನಿಖರ ಮಾಹಿತಿ ಪಡೆದು ಮೀಸಲಾತಿಯನ್ನು ಅಂತಿಮಗೊಳಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಹೆತ್ತೇನಹಳ್ಳಿ ಮಂಜುನಾಥ್ ಬುಧವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಮನವಿ ಪತ್ರ ಸಲ್ಲಿಸಿ, ಮೀಸಲಾತಿ ಗೊಂದಲದ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
"ಹಲವು ವರ್ಷಗಳಿಂದ ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ನಿರ್ದಿಷ್ಟ ಜಾತಿ, ಒಂದೇ ವರ್ಗ ಹಾಗೂ ಕೆಲವೇ ವ್ಯಕ್ತಿಗಳು ಆಯ್ಕೆಯಾಗುತ್ತಾ ಬಂದಿದ್ದಾರೆ. ಒಂದೇ ವರ್ಗಕ್ಕೆ ಪದೇಪದೇ ಮೀಸಲಾತಿ ನೀಡಲಾಗುತ್ತಿದೆ. ಮುಖ್ಯವಾಗಿ ಶಾಸಕರು ಮತ್ತು ಮಾಜಿ ಶಾಸಕರ ಬೆಂಬಲಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೀಸಲಾತಿ ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ಸಣ್ಣ ಸಮುದಾಯಗಳು ರಾಜಕೀಯ ಅವಕಾಶಗಳಿಂದ ವಂಚಿತವಾಗುತ್ತಿವೆ. ಆದ್ದರಿಂದ ಸಾಮಾನ್ಯ ಜನರ ಅಹವಾಲುಗಳನ್ನು ಆಲಿಸಬೇಕು" ಎಂದು ಒತ್ತಾಯಿಸಿದರು.
"ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ಎಲ್ಲಾ ಕೆಲಸಗಳು ನಡೆಯಬೇಕಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರಕಟವಾಗಿರುವ ಮೀಸಲಾತಿ ಪಟ್ಟಿಯಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ. ಇದು ಖಂಡನೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಬೆಳವಣಿಗೆಯಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ, ವೈಜ್ಞಾನಿಕವಾಗಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕು" ಎಂದು ಮನವಿ ಮಾಡಿದರು.
ಮೀಸಲಾತಿ ಪಟ್ಟಿ ಪ್ರಕಟವಾದ ನಂತರ ಆಕ್ಷೇಪಣೆಗೆ ಅವಕಾಶ ಕಲ್ಪಿಸಿ, ಸಾರ್ವಜನಿಕರ ಚರ್ಚೆಗೆ ಅನುವು ಮಾಡಿಕೊಡಬೇಕು. ಈಗಾಗಲೇ ಪ್ರಕಟವಾಗಿರುವ ಮೀಸಲಾತಿ ಪಟ್ಟಿಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಿ, ಮತ್ತೊಮ್ಮೆ ಅಧಿಕೃತವಾಗಿ ಆದೇಶ ಹೊರಡಿಸಿ ಅಂತಿಮ ಪಟ್ಟಿ ಪ್ರಕಟಿಸಬೇಕು. ಸಾರ್ವಜನಿಕರಿಂದ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಧ್ವನಿ ಇಲ್ಲದ ಶೋಷಿತ ಸಮುದಾಯಗಳ ಪರ ನಿಲ್ಲಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಜಹೀರ್ ಅಬ್ಬಾಸ್, ರಂಗಸ್ವಾಮಿ, ರವೀಂದ್ರ ಉಪಸ್ಥಿತರಿದ್ದರು.
Kshetra Samachara
29/07/2026 04:57 pm