ತುಮಕೂರು: ಜೈನ ಧರ್ಮದ ಶಾಂತಿ, ಸಹನೆ, ಅಹಿಂಸೆ ಸಂದೇಶ ಜಗತ್ತಿನ ಎಲ್ಲೆಡೆ ಪಾಲನೆಯಾಗಲಿ, ಇಂದಿನ ಅಶಾಂತ ವಾತಾವರಣದಲ್ಲಿ ಶಾಂತಿ, ಭಾವೈಕ್ಯತೆ ಜೈನ ಧರ್ಮ ಸಾರುವ ಸಂದೇಶ ಪ್ರಸ್ತುತವಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಆಚಾರ್ಯಶ್ರೀ 108 ಪ್ರಮುಖ್ ಸಾಗರ್ ಜೀ ಮಹಾರಾಜ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಚಾತುರ್ಮಾಸ ಕಳಸ ಸ್ಥಾಪನೆ ಅಂಗವಾಗಿ ಶನಿವಾರ ನಗರದ ಜೈನ ಭವನದಲ್ಲಿ ನಡೆದ ಗುರುಪೂರ್ಣಿಮೆಯ ಧರ್ಮ ಸಭೆಯಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಜೈನ ಧರ್ಮ ಹಾಗೂ ಶಾಂತಿಪ್ರಿಯರಾದ ಜೈನ ಬಾಂಧವರು ವಿವಿಧ ರೀತಿಯಲ್ಲಿ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜೈನ ಬಸದಿಗಳ ಸಂರಕ್ಷಣೆ, ಅಭಿವೃದ್ಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಸಹಕಾರಿಯಾಗಿದ್ದಾರೆ ಎಂದು ಹೇಳಿದರು.
ಬರುವ ಜನವರಿಯಲ್ಲಿ ತುಮಕೂರು ಸಮೀಪದ ಮಂದರಗಿರಿ ಜೈನ ಕ್ಷೇತ್ರದಲ್ಲಿ ಚಂದ್ರಪ್ರಭಾ ತೀರ್ಥಂಕರ ಮೂರ್ತಿಯ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯಲು ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಸಚಿವರು, ಮಂದರಗಿರಿ ಕ್ಷೇತ್ರದಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಆಚಾರ್ಯಶ್ರೀ 108 ಪ್ರಮುಖ್ ಸಾಗರ್ ಜೀ ಮಹಾರಾಜ ಸ್ವಾಮೀಜಿಯವರು ಕಳಸಗಳಿಗೆ ಮಂಗಳ ದ್ರವ್ಯಗಳ ತುಂಬಿ ನಂತರ ಮಾತನಾಡಿ, ಚಾತುರ್ಮಾಸದಲ್ಲಿ ಕಳಸಗಳಿಗೆ ಮಂಗಳ ದ್ರವ್ಯಗಳನ್ನು ತುಂಬುವುದು ಊರು, ದೇಶದಲ್ಲಿ ಪಾವಿತ್ರತೆ ಭಾವನೆಯ ಪ್ರತೀಕವಾಗಿದೆ. ಗುರುಗಳಿಂದ ಕಳಸ ಸ್ಥಾಪನೆ ಮೂಲಕ ಸಮಾಜದ ಶಾಂತಿ, ಸುಭೀಕ್ಷತೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಎನ್.ಆರ್. ಪುರ ಕ್ಷೇತ್ರದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಮಂದರಗಿರಿ ಸುತ್ತಮುತ್ತ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡು ಕ್ಷೇತ್ರದ ಪಾವಿತ್ರತೆ ರಕ್ಷಿಸಬೇಕು ಎಂದು ಹೇಳಿದರು.
ಶೃಂಗೇರಿ-ಎನ್.ಆರ್. ಪುರ ಮಾರ್ಗದಲ್ಲಿ ರೈಲು ಮಾರ್ಗ ನಿರ್ಮಾಣ ಮಾಡಿ, ರೈಲು ಪ್ರಯಾಣ ಸೇವೆ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ರೈಲ್ವೆ ಸಚಿವ ವಿ. ಸೋಮಣ್ಣನವರಿಗೆ ಈ ವೇಳೆ ಮನವಿ ಮಾಡಿದರು.
ನಗರದ ದಿಗಂಬರ ಜೈನ ಶ್ರೀ ಪಾರ್ಶ್ವನಥಸ್ವಾಮಿ ಜಿನ ಮಂದಿರ ಅಧ್ಯಕ್ಷ ಟಿ.ಡಿ. ಬಾಹುಬಲಿ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಶೀತಲ್, ಕಾರ್ಯದರ್ಶಿ ಟಿ.ಜೆ. ನಾಗರಾಜ್, ಖಜಾಂಚಿ ಸುಭೋದ್‌ಕುಮಾರ್ ಜೈನ್, ನಿರ್ದೇಶಕರು, ಸಮಾಜದ ಮುಖಂಡರಾದ ಆರ್.ಎ. ಸುರೇಶ್, ಬಿ.ಎಲ್. ಚಂದ್ರಕೀರ್ತಿ, ವಿನಯ್ ಜೈನ್, ಜಿನೇಶ್ ಸುರೇಶ್ ಬಾಂಡ್ ಮೊದಲಾದವರು ಭಾಗವಹಿಸಿದ್ದರು.
Kshetra Samachara
02/08/2026 08:14 am