ದುಬೈ: ಟೀಂ ಇಂಡಿಯಾದ ಭರವಸೆಯ ಆಟಗಾರ ಹಾಗೂ ನಾಯಕ ಶುಭಮನ್ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಕಟಿಸಿರುವ ನೂತನ ಏಕದಿನ (ODI) ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ವಿಶ್ವದ ನಂಬರ್-1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಹೊಸ ಶ್ರೇಯಾಂಕದ ಪಟ್ಟಿಯಲ್ಲಿ, ನ್ಯೂಜಿಲೆಂಡ್‌ನ ದೈತ್ಯ ಬ್ಯಾಟರ್ ಡೆರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿರುವ ಗಿಲ್ ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಸ್ತುತ ಶುಭಮನ್ ಗಿಲ್ 801 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಡೆರಿಲ್ ಮಿಚೆಲ್ 794 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ವರ್ಷದ ಜನವರಿಯಿಂದ ಅಗ್ರಸ್ಥಾನದಲ್ಲಿದ್ದ ಮಿಚೆಲ್ ಅವರ ಆಳ್ವಿಕೆಗೆ ಮುಕ್ತಾಯ ಹಾಡಿರುವ ಗಿಲ್, ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಜಗತ್ತಿನ ಶ್ರೇಷ್ಠ ಏಕದಿನ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ಶುಭಮನ್ ಗಿಲ್, ಭಾರತೀಯ ಕ್ರಿಕೆಟ್ ಪಡೆಗೆ ಗಟ್ಟಿ ಬುನಾದಿ ಒದಗಿಸುತ್ತಿದ್ದಾರೆ. ಇದೇ ಪ್ರದರ್ಶನ ಅವರಿಗೆ ಮತ್ತೆ ಮೊದಲ ಸ್ಥಾನ ತಂದುಕೊಟ್ಟಿದೆ.
ವಿಶೇಷವೆಂದರೆ, ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದ ಟಾಪ್-5 ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟರ್‌ಗಳು ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ (767 ಪಾಯಿಂಟ್ಸ್) ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ (758 ಪಾಯಿಂಟ್ಸ್) ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
PublicNext
30/07/2026 07:52 am
LOADING...