ಬಂಡೀಪುರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತ ಸದ್ದಿಲ್ಲದೆ ರೆಸಾರ್ಟ್ ಮಾಫಿಯಾ ಬೇರುಬಿಡುತ್ತಿದೆಯೇ? ಅರಣ್ಯ ಪ್ರದೇಶದ ಸಮೀಪ ಅಕ್ರಮ ನಿರ್ಮಾಣ, ಭೂಸ್ವಾಧೀನ ಮತ್ತು ವನ್ಯಜೀವಿಗಳ ಆವಾಸಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಮ್ಮ ವಿಶೇಷ ವರದಿ.
ಬಂಡೀಪುರದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ಕಾಂಪೌಂಡ್ ಹಾಗೂ ಕಟ್ಟಡ ಕಾಮಗಾರಿಗಳು ವೇಗವಾಗಿ ನಡೆಯುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿರ್ಮಾಣ ಕಾಮಗಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು, ಅಕ್ರಮ ಭೂಸ್ವಾಧೀನ, ವನ್ಯಸಂಪತ್ತಿನ ಸರ್ವನಾಶ ಹಾಗೂ ವನ್ಯಜೀವಿಗಳ ವಾಸಸ್ಥಾನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ, ಬಂಡೀಪುರದ ಪರಿಸರ ವ್ಯವಸ್ಥೆಗೆ ಗಂಭೀರ ಹಾನಿಯಾಗಬಹುದು ಎಂಬ ಎಚ್ಚರಿಕೆ ಕೇಳಿಬಂದಿದೆ.
"ಕಾಡಂಚಿನ ರೈತರ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಿ ಬದುಕು ಕಟ್ಟಿಕೊಂಡಿರುವ ಅನ್ನದಾತರಿಗೆ ಅನ್ಯಾಯವಾಗಿ ತೊಂದರೆ ಕೊಡುವ ಇಲಾಖೆ ಅಧಿಕಾರಿಗಳಿಗೆ ಇದರ ಮಾಹಿತಿ ಇಲ್ಲವೇ?" ಎಂದು ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಗೋವಿನಾಯಕ್ ಪ್ರಶ್ನಿಸಿದ್ದಾರೆ. ಅರಣ್ಯ ಸಂರಕ್ಷಣೆಯ ವಿಚಾರದಲ್ಲಿ ಜಾಗ್ರತೆ ವಹಿಸಬೇಕಿರುವ ಅಧಿಕಾರಿಗಳು ಪ್ರಮಾದ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಅರಣ್ಯದೊಳಗೆ ನಡೆಯುತ್ತಿರುವ ಅಕ್ರಮದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಅವರು ಒತ್ತಾಯಿಸಿದ್ದಾರೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಬಂಡೀಪುರ ಉಳಿಯಬೇಕು... ವನ್ಯಜೀವಿಗಳು ಸುರಕ್ಷಿತವಾಗಿರಬೇಕು... ಅಕ್ರಮ ರೆಸಾರ್ಟ್ ಮಾಫಿಯಾಗೆ ಕಡಿವಾಣ ಬೀಳುತ್ತದೆಯೇ? ಸಂಬಂಧಪಟ್ಟ ಇಲಾಖೆಗಳು ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
PublicNext
30/07/2026 02:17 pm