ಚಾಮರಾಜನಗರ : ನಗರಸಭೆಯ ಅವ್ಯವಸ್ಥೆಯನ್ನು ಖಂಡಿಸಿ ಎಸ್‌ಡಿಪಿಐ (SDPI) ನೇತೃತ್ವದಲ್ಲಿ ವಿವಿಧ ವಾರ್ಡ್‌ಗಳ ನಿವಾಸಿಗಳು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಹಳೆಯ ಆರ್‌ಟಿಒ (RTO) ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತಳ್ಳುವ ಗಾಡಿಯಲ್ಲಿ ಕಸ ತುಂಬಿಕೊಂಡು ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತದ ಮೂಲಕ ಸಾಗಿ ನಗರಸಭೆ ಬಳಿ ತಲುಪಿದರು. ಮೆರವಣಿಗೆಯುದ್ದಕ್ಕೂ ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
"ನಗರಸಭೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಇಲ್ಲಿ ಹಣವಿಲ್ಲದೆ ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯುವುದಿಲ್ಲ. ಜನರು ತಮ್ಮ ಕೆಲಸಕ್ಕಾಗಿ ನಗರಸಭೆ ಸಿಬ್ಬಂದಿಗೆ ಹಣ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಲವು ಬಾರಿ ಲೋಕಾಯುಕ್ತ ದಾಳಿಯಾದರೂ ಇಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಳ್ಳದೆ ಜನರಿಂದ ಸುಲಿಗೆಗೆ ಮುಂದಾಗಿದ್ದಾರೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
"ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರು ಭ್ರಷ್ಟ ಅಧಿಕಾರಿಗಳನ್ನು ನಗರಸಭೆಯಿಂದ ಹೊರಗೆ ಹಾಕುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿಯವರು ನಗರಸಭೆ ಅಧಿಕಾರಿಗಳಿಗೆ ಕೂಡಲೇ ಬುದ್ಧಿ ಹೇಳುವ ಕೆಲಸ ಮಾಡಬೇಕು. ನಗರದ ಬಹುತೇಕ ವಾರ್ಡ್‌ಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. ಸ್ವಚ್ಛತೆಯ ಬಗ್ಗೆ ಕ್ರಮ ವಹಿಸಬೇಕು. ನಗರಸಭೆಯಲ್ಲಿನ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು. ಅಲ್ಲದೆ ಸಾರ್ವಜನಿಕರ ಸುಗಮ ಕೆಲಸಕ್ಕೆ ಸೂಕ್ತ ಕ್ರಮ ವಹಿಸಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
PublicNext
05/08/2026 05:14 pm
LOADING...