ಹಾಸನ : ಕರ್ನಾಟಕದ ಹಿತಾಸಕ್ತಿ ಹಾಗೂ ರೈತರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದಲ್ಲಿದ್ದಾಗ "ನಮ್ಮ ನೀರು, ನಮ್ಮ ಹಕ್ಕು" ಎಂದು ನಡೆಸಿದ ಪಾದಯಾತ್ರೆಯನ್ನು ನೆನಪಿಸುತ್ತಾ, ಈಗಲೂ ಅದೇ ನಿಲುವನ್ನು ಕಾಯ್ದುಕೊಂಡು ರಾಜ್ಯದ ಹಕ್ಕನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.
ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿದ್ದು, ನೀರಿನ ನಿಜವಾದ ಅಗತ್ಯ ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರಿನ ಕುಡಿಯುವ ನೀರಿನ ಭವಿಷ್ಯಕ್ಕೆ ಹಾಗೂ ರಾಜ್ಯದ ರೈತರಿಗೆ ಇದೆ. ಆದ್ದರಿಂದ ಮುಖ್ಯಮಂತ್ರಿಗಳು ತಮಿಳುನಾಡಿಗೆ "ವಾಟರ್ ಮ್ಯಾನ್" ಆಗದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕು; ಅಂತಹ ನಿಲುವಿಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿ.ಟಿ. ರವಿ ಅವರು, ರಾಜ್ಯದಲ್ಲಿ ವೆಟರನರಿ ಇನ್‌ಸ್ಪೆಕ್ಟರ್, ಪೊಲೀಸ್ ಇಲಾಖೆ, ಪಿಡಿಒ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಅಕ್ರಮ ಹಾಗೂ ಹಣದ ವ್ಯವಹಾರ ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿ, ಈ ಎಲ್ಲಾ ಪ್ರಕರಣಗಳ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದರು. ಅಲ್ಲದೆ, ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಕಾಂಗ್ರೆಸ್ ಅಧಿಕಾರ ರಾಜಕಾರಣದಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.
ಕೇಂದ್ರ ಸಚಿವರಾಗಿ ಪ್ರಲ್ಹಾದ್ ಜೋಶಿ ಅವರ ಕಾರ್ಯಾಚರಣೆಯನ್ನು ಹೆಮ್ಮೆಯಿಂದ ಕಾಣುವ ಬದಲು ಕಾಂಗ್ರೆಸ್ ಟೀಕಿಸುತ್ತಿರುವುದನ್ನು ಖಂಡಿಸಿದ ಅವರು, ಬಿಜೆಪಿ ನಾಯಕರ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ದೂರಿದರು.
ದೇಶದಲ್ಲಿ ಪ್ರಧಾನಿ ಅಥವಾ ಮುಖ್ಯ ನ್ಯಾಯಮೂರ್ತಿಗಳನ್ನು ಟೀಕಿಸಿದರೆ ಕ್ರಮವಿಲ್ಲ, ಆದರೆ ರಾಹುಲ್ ಗಾಂಧಿಯವರನ್ನು ಟೀಕಿಸಿದರೆ ತಕ್ಷಣ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಗಾಂಧಿ ಕುಟುಂಬವನ್ನು ಸಂವಿಧಾನಕ್ಕಿಂತ ಮೇಲಿಡಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ. ರವಿ, ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರೂ ಸಮಾನರು ಹಾಗೂ ಇಂತಹ ಬೆದರಿಕೆಗಳಿಗೆ ಹೆದರದೆ ರಾಜ್ಯದ ಹಿತಾಸಕ್ತಿಗಾಗಿ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
PublicNext
30/07/2026 08:54 pm