ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ‘ಕಂಬಳಿ ಕೊಪ್ಪೆ’ ಈಗ ಬರೀ ನೆನಪು!

ಚಿಕ್ಕಮಗಳೂರು: ಆಧುನಿಕತೆಯ ಅಲೆಯ ನಡುವೆ ನಮ್ಮ ಸಾಂಪ್ರದಾಯಿಕ ಹಾಗೂ ಜಾನಪದ ಜೀವನಶೈಲಿಯ ಅನೇಕ ವಸ್ತುಗಳು ಮೂಲೆಗುಂಪಾಗುತ್ತಿವೆ. ಅಂತಹವುಗಳಲ್ಲಿ ಮಲೆನಾಡಿಗರ ಜೀವನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 'ಕಂಬಳಿ ಕೊಪ್ಪೆ' ಕೂಡ ಒಂದು. ಒಂದು ಕಾಲದಲ್ಲಿ ಬಡವ-ಶ್ರೀಮಂತ ಎನ್ನದೆ ಪ್ರತಿಯೊಬ್ಬ ಮಲೆನಾಡಿಗನ ಮನೆಯಲ್ಲೂ ಕಡ್ಡಾಯವಾಗಿ ಇರುತ್ತಿದ್ದ ಈ ಕಂಬಳಿ ಕೊಪ್ಪೆ, ಇಂದು ಕೇವಲ ಸವಿನೆನಪಾಗಿ ಉಳಿಯುವ ಹಂತಕ್ಕೆ ಬಂದು ತಲುಪಿದೆ.

ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಹಾಗೂ ಕಳಸದಂತಹ ಅಪ್ಪಟ ಮಲೆನಾಡು ಭಾಗಗಳಲ್ಲಿ ಮಳೆಗಾಲ ಆರಂಭವಾಗುವ ಮುನ್ನವೇ ಜನರು ಈ ಕಂಬಳಿ ಕೊಪ್ಪೆಯನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದರು. ಧೋ ಎಂದು ಸುರಿಯುವ ಮಳೆಯಲ್ಲೂ ಇದನ್ನು ಧರಿಸಿ ಗತ್ತಿನಿಂದ ನಡೆಯುತ್ತಿದ್ದ ದೃಶ್ಯವೇ ಒಂದು ಸೌಂದರ್ಯ.

ಮೇ ತಿಂಗಳು ಬರುತ್ತಿದ್ದಂತೆ ಚಿತ್ರದುರ್ಗ, ದಾವಣಗೆರೆ ಹಾಗೂ ಬಳ್ಳಾರಿ ಭಾಗಗಳಿಂದ ವ್ಯಾಪಾರಿಗಳು ಕಂಬಳಿಗಳನ್ನು ಹೊತ್ತು ಮಲೆನಾಡಿನ ಹಳ್ಳಿ ಹಳ್ಳಿಗೂ ಬಂದು ಮಾರಾಟ ಮಾಡುತ್ತಿದ್ದರು. ಅಂದು ಕೇವಲ 200 ರಿಂದ 300 ರೂಪಾಯಿಗೆ ಸಿಗುತ್ತಿದ್ದ ಕಂಬಳಿಯ ಬೆಲೆ ಇಂದು ಸಾವಿರ ರೂಪಾಯಿವರೆಗೆ ಏರಿದೆ.

ಚೌಕಾಕಾರದ ಕಂಬಳಿಯನ್ನು ತ್ರಿಕೋನ ಆಕಾರದಲ್ಲಿ ಮಡಚಿ, ತಂತಿಯ ನೆರವಿನಿಂದ ಕೊಪ್ಪೆಯಂತೆ ರೂಪಿಸಿ ತಲೆಯ ಮೇಲೆ ಧರಿಸುವುದು ಒಂದು ವಿಶಿಷ್ಟ ಕಲೆಯಾಗಿತ್ತು.

ಮಲೆನಾಡಿಗರು ಇದನ್ನು ಕೇವಲ ಮಳೆಯಿಂದ ರಕ್ಷಣೆ ಪಡೆಯಲು ಮಾತ್ರವಲ್ಲದೆ, ಬಾಣಂತಿಯರಿಗೆ ಬೆಚ್ಚಗಿನ ವಾತಾವರಣ ನೀಡಲು ಹಾಗೂ ಮನೆಗೆ ಬಂದ ಅತಿಥಿಗಳಿಗೆ ಹಾಸಿಗೆಯಾಗಿಯೂ ಬಳಸುತ್ತಿದ್ದರು. ಆದರೆ, ಇಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ವಿವಿಧ ನಮೂನೆಯ ರೈನ್‌ಕೋಟ್‌ಗಳ ಆರ್ಭಟಕ್ಕೆ ಸಿಲುಕಿ ಈ ಸಾಂಪ್ರದಾಯಿಕ ಕಂಬಳಿಕೊಪ್ಪೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಆದಾಗ್ಯೂ, ಕೆಲವು ಹಿರಿಯರು ಇಂದಿಗೂ ಇದರ ಮಹತ್ವವನ್ನು ಅರಿತು ಬಳಸುತ್ತಿರುವುದು ವಿಶೇಷವಾಗಿದೆ.

Edited By :
PublicNext

PublicNext

31/07/2026 06:44 pm

Cinque Terre

11.52 K

Cinque Terre

0

ಸಂಬಂಧಿತ ಸುದ್ದಿ