ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ವಾಹನ ತಪಾಸಣೆ ವೇಳೆ ಖಾಕಿಗೆ ಡಿಕ್ಕಿ ಹೊಡೆದ ಬೈಕ್! ಪೊಲೀಸ್ ಸಿಬ್ಬಂದಿಗೆ ಗಾಯ

ಚಿಕ್ಕಮಗಳೂರು: ಕಡೂರು ರಸ್ತೆಯ ಪವಿತ್ರವನದ ಸಮೀಪ ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದ ಸಂಚಾರ ಪೊಲೀಸ್ ಸಿಬ್ಬಂದಿಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಬೈಕ್ ಡಿಕ್ಕಿ ಹೊಡೆದು ಗಾಯಗೊಳಿಸಿರುವ ಘಟನೆ ನಡೆದಿದೆ. ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ ಸಿ.ಎಸ್. ಗಾಯಗೊಂಡವರಾಗಿದ್ದಾರೆ. ಜುಲೈ 28ರಂದು ಮಧ್ಯಾಹ್ನ ಸಂಚಾರ ಠಾಣೆಯ ಪಿಎಸ್ಐ ನಾಗೇಶ್ ಎ. ಹಾಗೂ ಸಿಪಿಸಿ ದರ್ಶನ್ ಹೆಚ್.ಎನ್. ಅವರೊಂದಿಗೆ ಪ್ರದೀಪ ರವರು ಪವಿತ್ರವನದ ಬಳಿ ವಾಹನ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕಡೆಯಿಂದ ಕಡೂರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬೈಕ್ (KA 18 EK 8350) ಚಾಲಕ, ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪ್ರದೀಪ ಅವರಿಗೆ ಏಕಾಏಕಿ ಡಿಕ್ಕಿ ಹೊಡೆಸಿದ್ದಾನೆ. ಘಟನೆಯಲ್ಲಿ ಬೈಕಿನ ಹ್ಯಾಂಡಲ್ ತಾಗಿ ಪ್ರದೀಪ ಅವರ ಎಡಕೈನ ಮಣಿಕಟ್ಟಿನ ಭಾಗಕ್ಕೆ ಬಲವಾದ ಪೆಟ್ಟಾಗಿದೆ. ಕೂಡಲೇ ಸ್ಥಳದಲ್ಲಿದ್ದ ಪಿಎಸ್ಐ ನಾಗೇಶ್ ಹಾಗೂ ದರ್ಶನ್ ಅವರು ಗಾಯಾಳುವನ್ನು ಚಿಕ್ಕಮಗಳೂರಿನ ಸರ್ಕಾರಿ ಎಂ.ಜಿ. ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಗೆ ಕಾರಣವಾದ ಬೈಕ್ ಹಾಗೂ ಅದರ ಚಾಲಕನ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

31/07/2026 10:52 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ