ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಅತಿವೇಗಕ್ಕೆ ಗೆಳೆಯ ಬಲಿ: ಕಾರು ಚಾಲಕನಿಗೆ 9 ತಿಂಗಳು ಜೈಲು ಶಿಕ್ಷೆ!

ಚಿಕ್ಕಮಗಳೂರು: ಅತಿವೇಗ ಹಾಗೂ ಅಜಾಗರೂಕತೆಯ ಕಾರು ಚಾಲನೆಯಿಂದ ಸಂಭವಿಸಿದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ನೇಹಿತನ ಸಾವಿಗೆ ಕಾರಣವಾದ ಬೇಲೂರು ತಾಲೂಕಿನ ಬಿಳುಗುಲಿ ಗ್ರಾಮದ ಬಿ.ಎಸ್. ಮೋಹಿತ್ ಎಂಬಾತನಿಗೆ ಚಿಕ್ಕಮಗಳೂರಿನ ಒಂದನೇ ಅಧಿಕ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು 9 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 4,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಈ ದುರಂತವು 2023ರ ಮಾರ್ಚ್ 23ರ ರಾತ್ರಿ ಸಂಭವಿಸಿತ್ತು. ಮೋಹಿತ್ ತನ್ನ ಸ್ನೇಹಿತರಾದ ವಿವೇಕ್ ಮುನ್ಸಿ, ದರ್ಶನ್ ಆರಾಧ್ಯ ಮತ್ತು ಕಾರ್ತಿಕ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೌಸಿಂಗ್ ಬೋರ್ಡ್‌ನ ಟೀಚರ್ಸ್ ಕಾಲೋನಿಯಿಂದ ಕಣಿವೆದಾಸರಹಳ್ಳಿಗೆ ತೆರಳಿ ಮರಳುವ ವೇಳೆ ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಫಾರೆಸ್ಟ್ ಗೇಟ್ ಸಮೀಪ ಭೀಕರವಾಗಿ ಮಗುಚಿ ಬಿದ್ದಿತ್ತು. ಈ ಅಪಘಾತದಲ್ಲಿ ಮುಂಭಾಗದ ಸೀಟಿನಲ್ಲಿದ್ದ ವಿವೇಕ್ ಮುನ್ಸಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು, ಹಿಂಭಾಗದಲ್ಲಿದ್ದ ದರ್ಶನ್ ಮತ್ತು ಕಾರ್ತಿಕ್ ತೀವ್ರವಾಗಿ ಗಾಯಗೊಂಡಿದ್ದರು.

ಪ್ರಕರಣದ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದ್ಯಾವಪ್ಪ ಅವರು ಆರೋಪಿ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದು, ನಿಗದಿತ ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 60 ದಿನಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕರಾದ ಕವಿತಾ ಎಚ್.ಡಿ. ವಾದ ಮಂಡಿಸಿದ್ದರು.

Edited By : PublicNext Desk
Kshetra Samachara

Kshetra Samachara

04/08/2026 08:09 pm

Cinque Terre

660

Cinque Terre

0

ಸಂಬಂಧಿತ ಸುದ್ದಿ