ಜಕಾರ್ತಾ: ಇಂಡೋನೇಷ್ಯಾದ ಮಧುರಾ ದ್ವೀಪದ ಸಮೀಪ 271 ಜನರಿದ್ದ ಫೆರ್ರಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 41 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಫೆರ್ರಿ ಸಮುದ್ರ ಮಧ್ಯೆ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ರಕ್ಷಣಾ ಪಡೆಗಳು ಹಾಗೂ ಸಮೀಪದಲ್ಲಿದ್ದ ಹಡಗುಗಳ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಹಲವು ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇದರಿಂದ ಸಂಭವಿಸಬಹುದಾದ ಹೆಚ್ಚಿನ ಪ್ರಾಣಹಾನಿ ತಪ್ಪಿದಂತಾಗಿದೆ.
ಫೆರ್ರಿಯು ಪೂರ್ವ ಜಾವಾ ಪ್ರಾಂತ್ಯದ ಸುರಬಯಾ ನಗರದಿಂದ ದಕ್ಷಿಣ ಸುಲವೇಸಿ ಪ್ರಾಂತ್ಯದ ಮಕಾಸ್ಸರ್ ನಗರಕ್ಕೆ ತೆರಳುತ್ತಿತ್ತು. ಈ ವೇಳೆ ಜಾವಾದ ಈಶಾನ್ಯ ಕರಾವಳಿಯ ಸಮೀಪವಿರುವ ಮಧುರಾ ದ್ವೀಪದ ಬಳಿ ಈ ದುರಂತ ಸಂಭವಿಸಿದೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ಆರಂಭಿಸಿರುವ ಅಧಿಕಾರಿಗಳು, ನಾಪತ್ತೆಯಾದವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
PublicNext
02/08/2026 06:53 pm
LOADING...