ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂದಾಯ ಸಚಿವರ ತವರಲ್ಲೇ ಭೂಹಗರಣ ಬಯಲು; 7 ಮಂದಿ ವಿರುದ್ಧ ಎಫ್‌ಐಆರ್

ತುಮಕೂರು: ಕಂದಾಯ ಸಚಿವರ ತವರು ಜಿಲ್ಲೆಯಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ, ನ್ಯಾಯಾಲಯಕ್ಕೂ ವಂಚಿಸಿ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಬಡವರ ಭೂಮಿ ಕಬಳಿಸಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ ನಾಡಕಚೇರಿಯ ಗ್ರಾಮ ಲೆಕ್ಕಿಗ ಸುನಿಲ್ ಕುಮಾರ್, ಕಂದಾಯ ನಿರೀಕ್ಷಕ ಅರುಣ್ ಕುಮಾರ್ ಹಾಗೂ ಗ್ರಾಮ ಸೇವಕ ಸೇರಿದಂತೆ ಏಳು ಜನರ ವಿರುದ್ಧ ಕೋರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಈ ಭೂಹಗರಣ ನಡೆದಿದೆ. ತುಮಕೂರು ತಾಲೂಕು ಕೋರ ಹೋಬಳಿ ಹೊಟ್ಟೆಮಲ್ಲನಪಾಳ್ಯ ಗ್ರಾಮದ ಸ.ನಂ. 16/4ರ ಜಮೀನನ್ನು, ಅದರ ಮೂಲ ಅನುಭವದಾರರ ಗಮನಕ್ಕೆ ಬಾರದಂತೆ ದೊಡ್ಡಬಳ್ಳಾಪುರ ಮೂಲದ ವ್ಯಕ್ತಿಗಳು ನಕಲಿ ವಂಶವೃಕ್ಷ ಸೃಷ್ಟಿಸಿ ನ್ಯಾಯಾಲಯದಲ್ಲಿ ರಾಜೀ ಡಿಕ್ರಿ ಆದೇಶ ಮಾಡಿಸಿಕೊಂಡಿದ್ದರು. ಬಳಿಕ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಜಮೀನು ಕಬಳಿಸಲು ಮುಂದಾಗಿದ್ದರು. ಸದರಿ ಜಮೀನಿನ ಪೋಡಿ ಕಾರ್ಯಕ್ಕೆ ಸರ್ವೇ ಇಲಾಖೆಯ ಅಧಿಕಾರಿಗಳು ಬಂದಾಗ ಈ ಅಸಲಿ ಸತ್ಯ ಮೂಲ ಅನುಭವದಾರರ ಗಮನಕ್ಕೆ ಬಂದಿದೆ.

ಇದರಿಂದ ನೊಂದ ಕುಟುಂಬವು ಅಕ್ರಮ ಎಸಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಭೂಗಳ್ಳರ ವಿರುದ್ಧ ದಯಾಮರಣಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ತೆರಳಿ ಪ್ರತಿಭಟನಾನಿರತರ ಮನವೊಲಿಸಿತ್ತು.

ಈಗ ನೊಂದಿರುವ ಸುಕನ್ಯಾ ಹಾಗೂ ಗಂಗಣ್ಣ ಅವರ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ದೊಡ್ಡಬಳ್ಳಾಪುರ ಮೂಲದ ಯಲ್ಲಮ್ಮ, ಕೆಂಪಯ್ಯ, ಲಕ್ಕಮ್ಮ, ಮಂಜುಳಾ ಸೇರಿದಂತೆ ಕೋರ ಹೋಬಳಿ ದೇವಲಾಪುರ ವೃತ್ತದ ಗ್ರಾಮ ಲೆಕ್ಕಿಗ ಸುನಿಲ್ ಕುಮಾರ್, ಕಂದಾಯ ನಿರೀಕ್ಷಕ ಅರುಣ್ ಕುಮಾರ್ ಮತ್ತು ಗ್ರಾಮ ಸೇವಕ ದೇವರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಭೂಗಳ್ಳರಿಗೆ ಸಾಥ್ ನೀಡಿದ್ರಾ ಕಂದಾಯ ಇಲಾಖೆ ಅಧಿಕಾರಿಗಳು?

ದೊಡ್ಡಬಳ್ಳಾಪುರ ಮೂಲದ ವ್ಯಕ್ತಿಗಳು ನಕಲಿ ವಂಶವೃಕ್ಷ ಸೃಷ್ಟಿಸಿಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಿ, ಬಳಿಕ ರಾಜೀ ಡಿಕ್ರಿ ಮಾಡಿಕೊಂಡು ಹೊಟ್ಟೆಮಲ್ಲನಪಾಳ್ಯದ ಬಳಿ ಇರುವ ಸ.ನಂ. 16/4ರ ಜಮೀನು ಲಪಟಾಯಿಸಲು ಹುನ್ನಾರ ನಡೆಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿರುವ ಈ ವ್ಯಕ್ತಿಗಳಿಗೆ ಇಲ್ಲೇ ಅದೇ ಹೆಸರಿನವರ ಜಮೀನಿದೆ ಎಂದು ಮಾಹಿತಿ ನೀಡಿದವರು ಯಾರು? ಕಂದಾಯ ಇಲಾಖೆಯ ಅಧಿಕಾರಿಗಳೇ ಯಾಕೆ ಈ ಭೂಮಾಫಿಯಾದಲ್ಲಿ ಶಾಮೀಲಾಗಿರಬಾರದು ಎಂದು ಸ್ಥಳೀಯರು ಹಾಗೂ ನೊಂದ ಕುಟುಂಬಸ್ಥರು ಆರೋಪಿಸಿದ್ದಾರೆ.

ಸದರಿ ಭೂಮಿಯ ಪೋಡಿ ಕಾರ್ಯಕ್ಕೆ ಅನಧಿಕೃತ ವ್ಯಕ್ತಿಗಳು ಬಂದಾಗ ಮಾಹಿತಿ ಅರಿತ ಕುಟುಂಬಸ್ಥರು, ಸ್ಥಳೀಯ ಗ್ರಾಮ ಲೆಕ್ಕಿಗರ ಬಳಿ ಜಮೀನು ಬೇರೆಯವರಿಗೆ ಖಾತೆಯಾಗಿರುವ ಬಗ್ಗೆ ನಾಡಕಚೇರಿಗೆ ತೆರಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಗ್ರಾಮ ಲೆಕ್ಕಿಗ ತರಾತುರಿಯಲ್ಲಿ ಗ್ರಾಮ ಸಹಾಯಕನನ್ನು ಹೊಟ್ಟೆಮಲ್ಲನಪಾಳ್ಯಕ್ಕೆ ಕಳುಹಿಸಿ 128 (21) ಫಾರಂಗೆ ಸಹಿ ಮಾಡಿಸದೆ ದೇವಲಾಪುರ ಗ್ರಾಮಕ್ಕೆ ಕಳುಹಿಸಿ ಸಹಿ ಮಾಡಿಸಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಕೋರ ಹೋಬಳಿಯಲ್ಲಿ ಈ ರೀತಿ ಸಾಕಷ್ಟು ಅವ್ಯವಹಾರಗಳು ನಡೆದಿರುವ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದ್ದು, ಇನ್ನೆಷ್ಟು ಪ್ರಕರಣಗಳು ಬೀದಿಗೆ ಬರುತ್ತವೆಯೋ ಕಾದು ನೋಡಬೇಕಿದೆ.

Edited By :
PublicNext

PublicNext

03/08/2026 06:36 pm

Cinque Terre

6.81 K

Cinque Terre

0

ಸಂಬಂಧಿತ ಸುದ್ದಿ