ಶಿವಮೊಗ್ಗ: ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ದನಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆಗುಂಬೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ಮೂಲದ ಅಬ್ದುಲ್ ಮಜೀದ್ (35) ಎಂದು ಗುರುತಿಸಲಾಗಿದೆ.
ಜುಲೈ 30ರಂದು ಹೆಬ್ರಿ ವ್ಯಾಪ್ತಿಯಲ್ಲಿ ದನ ಕಳ್ಳತನ ನಡೆಸಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವನಗೌಡ ನೇತೃತ್ವದ ತಂಡ ಬೆನ್ನಟ್ಟಿತ್ತು.
ಹೆಬ್ರಿಯಿಂದ ಆಗುಂಬೆ, ಕಲ್ಮನೆ, ರಿಪ್ಪನ್‌ಪೇಟೆ ಮೂಲಕ ಬೆನವಳ್ಳಿವರೆಗೆ ಹಲವು ಕಿಲೋಮೀಟರ್‌ಗಳ ಕಾಲ ಸಿನಿಮೀಯ ರೀತಿಯಲ್ಲಿ ಚೇಸಿಂಗ್ ನಡೆದಿದೆ.
ಚೇಸಿಂಗ್ ವೇಳೆ ಆರೋಪಿ ಬೆನವಳ್ಳಿ ಸಮೀಪ ಕಾರನ್ನು ಬಿಟ್ಟು ದಟ್ಟ ಅರಣ್ಯದೊಳಗೆ ನುಗ್ಗಿ ಪರಾರಿಯಾಗಿದ್ದ. ಬಳಿಕ ಕಾರಿನಲ್ಲಿ ದೊರೆತ ದಾಖಲೆಗಳು ಹಾಗೂ ಇತರೆ ಸುಳಿವುಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Kshetra Samachara
06/08/2026 05:40 pm
LOADING...