ಧಾರವಾಡ : ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬಾಲಗರ್ಭಿಣಿ ಪ್ರಕರಣಗಳು ಧಾರವಾಡವನ್ನು ಬೆಚ್ಚಿಬೀಳಿಸುವ ಮಟ್ಟಕ್ಕೆ ತಲುಪಿವೆ. ಸುರಕ್ಷಿತವಾಗಿರಬೇಕಾದ ಮನೆ, ಶಾಲೆ, ಟ್ಯೂಷನ್ ಹಾಗೂ ವಸತಿನಿಲಯಗಳಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುವುದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬಾಲ್ಯವಿವಾಹ, ಪ್ರೀತಿಯ ಹೆಸರಿನಲ್ಲಿ ವಂಚನೆ ಹಾಗೂ ಲೈಂಗಿಕ ಶೋಷಣೆಯಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ವರದಿ ಇಲ್ಲಿದೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 1,691 ಬಾಲಗರ್ಭಿಣಿ ಪ್ರಕರಣಗಳು ದಾಖಲಾಗಿವೆ. 14 ರಿಂದ 18 ವರ್ಷದೊಳಗಿನ ಬಾಲಕಿಯರಲ್ಲೇ ಗರ್ಭಧಾರಣೆಯ ಪ್ರಕರಣಗಳು ಅತಿ ಹೆಚ್ಚು ವರದಿಯಾಗಿದ್ದು, ಈ ಅಂಕಿ-ಅಂಶಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಹತ್ತಿರದ ಸಂಬಂಧಿಕರಿಂದಲೇ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಲ್ಯವಿವಾಹ, ಪ್ರೀತಿಯ ಹೆಸರಿನಲ್ಲಿ ವಂಚನೆ ಹಾಗೂ ಲೈಂಗಿಕ ಶೋಷಣೆ ಹೆಚ್ಚಾಗಿವೆ. ಮನೆ, ಶಾಲೆ, ಟ್ಯೂಷನ್ ಕೇಂದ್ರ, ವಸತಿ ನಿಲಯ ಸೇರಿದಂತೆ ಬಾಲಕಿಯರು ಸುರಕ್ಷಿತವಾಗಿರಬೇಕಾದ ಸ್ಥಳಗಳಲ್ಲೇ ಇಂತಹ ಪ್ರಕರಣಗಳು ನಡೆಯುತ್ತಿವೆ. ಒಂದೇ ಕುಟುಂಬದ ಇಬ್ಬರು ಅಪ್ರಾಪ್ತ ಸಹೋದರಿಯರು ಗರ್ಭಿಣಿಯರಾಗಿರುವ ಪ್ರಕರಣವೂ ಸಮಾಜವನ್ನು ಬೆಚ್ಚಿಬೀಳಿಸಿದೆ.
ಬಾಲಗರ್ಭಿಣಿಯರ ಮಕ್ಕಳ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯೂ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ, ಇಂತಹ ಪ್ರಕರಣಗಳಿಗೆ ಶಾಶ್ವತ ತಡೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಆರ್.ಸ್ನೇಹಲ್, "ನಾವು ಈ ವಿಚಾರವಾಗಿ ವಿಶೇಷ ತಂಡ (Team) ರಚನೆ ಮಾಡಿದ್ದೇವೆ. ಇನ್ನುಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.
ಒಟ್ಟಿನಲ್ಲಿ ಬಾಲಕಿಯರ ಸುರಕ್ಷತೆ ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜದ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಿ ಮಕ್ಕಳ ರಕ್ಷಣೆಗೆ ಕೈಜೋಡಿಸಬೇಕಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಹಾಗೂ ನಿರಂತರ ಜಾಗೃತಿ ಅಭಿಯಾನಗಳ ಮೂಲಕವೇ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ.
- ಪ್ರವೀಣ್ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2026 06:59 pm