ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ:ಸಿಟಿ ಕಸ ತಂದು ನಮ್ಮೂರಾಗ ಸುರಿಬ್ಯಾಡ್ರಿ: ಘನತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ವಿರೋಧ

ಧಾರವಾಡ: ಸಿಟಿ ಕಸ ನಮ್ಮೂರಾಗ ತಂದು ಸುರಿಯೋದ ನಮಗ ಬ್ಯಾಡ್ರಿ. ನಮ್ಮ ಹೊಲ, ಗಾಳಿ, ನೀಡು ಹಾಳು ಮಾಡುವ ಯೋಜನೆ ಯಾವ ಕಾರಣಕ್ಕೂ ಒಪ್ಪಂಗಿಲ್ಲ ಅಂತ ಧಾರವಾಡ ತಾಲ್ಲೂಕಿನ ಶಿವಳ್ಳಿ, ಹೆಬ್ಬಳ್ಳಿ ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳ ಜನ್ರು ಘನತಾಜ್ಯ ವಿಲೇವಾಡಿ ಘಟಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸ್ಯಾರ, ಇದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕಗೆ ತಲೆನೋವಾಗೈತಿ ನೋಡ್ರಿ.

ಪಾಲಿಕೆಯಿಂದ ಶಿವಳ್ಳಿ ಗುಡ್ಡದ ಮೇಲೆ ಘನತ್ಯಾಜ್ಯ ವಿಲೇವಾರಿ ಘಟಕ, ಬಯೋಗ್ಯಾಸ್ ಘಟಕ, ಎರೆಹುಳು ಗೊಬ್ಬರ ಘಟಕ ಹಾಗೂ ಶ್ವಾನ ಸಂತಾನಹರಣ ಕೇಂದ್ರ ಮಾಡೋಕೆ ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರು ಗಟ್ಟಿಯಾಗಿ ನಿಂತು ಎಚ್ಚರಿಕೆ ಕೊಟ್ಟಾರ. ರಾಷ್ಟ್ರೀಯ ಪಕ್ಷಿಗಳ ತಾಣ ಅಂತಾ ಹೆಸರಾಗಿದ್ದ 67 ಎಕರೆ ಗುಡ್ಡ ಹಾಳುಗೆಡವ್ಯಾರ ಅಂತ ಆರೋಪ ಸಹ ಮಾಡ್ಯಾರ.

ಇನ್ನೂ ಎರಡು ಸಾವಿರಕ್ಕೂ ಹೆಚ್ಚು ಜನ್ರು ಧಾರವಾಡ ನಗರದ ಮಹಾನಗರ ಪಾಲಿಕೆವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡಿದ್ರು. ಆಗ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಜಾಗಕ್ಕ ಬಂದು ಪರಿಶೀಲನೆ ಮಾಡ್ತೀವಿ ಅಂತಾ ಭರವಸೆ ಕೊಟ್ಟು ಹೋಗಿದ್ರು. ಆದ್ರ, ಇವತ್ತಿನವರೆಗೂ ಯಾರೂ ಬಂದಿಲ್ಲ ಅಂತಾ ಗ್ರಾಮಸ್ಥರು ಸಿಟ್ಟಿಗೆದ್ದಾರ.

ಹೊಸ ಯಲ್ಲಾಪುರದ ಕಸದ ಘಟಕವನ್ನ ಸರಿಯಾಗಿ ನೋಡಿಕೊಳ್ಳೋಕೆ ಆಗ್ತಿಲ್ಲ. ಇನ್ನೂ ನಮ್ಮೂರಾಗ ಇಷ್ಟೊಂದು ದೊಡ್ಡ ಕಸದ ಘಟಕ ಮಾಡ್ತೀವಿ ಅಂದ್ರ ಹೇಂಗ ನಂಬೋದು? ನಿಮ್ಮ ಸಿಟಿ ಕಸ ನಮ್ಮೂರಾಗ ಯಾಕ ತಂದು ಸುರಿತೀರಿ? ಅಂತಾ ಗ್ರಾಮೀಣ ಜನ ಗರಂ ಆಗ್ಯಾರ.

ಜನ್ರ ಮಾತನ್ನ ಲೆಕ್ಕಕ್ಕೇ ತೆಗೆದುಕೊಳ್ಳದೆ ಕಾಮಗಾರಿ ಮುಂದುವರಿಸಿದ್ರ, ಶಿವಳ್ಳಿ, ಹೆಬ್ಬಳ್ಳಿ, ಮಾರಡಗಿ, ಸುಳ್ಳ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಜನ ಸೇರಿ ಉಗ್ರ ಹೋರಾಟ ಮಾಡ್ತೀವಿ. ಮಹಾನಗರ ಪಾಲಿಕೆ ಕಸದ ವಾಹನಗಳನ್ನ ನಮ್ಮೂರೊಳಗ ಬಿಡಂಗಿಲ್ಲ. ಏನ್ ಆದ್ರೂ ಈ ಯೋಜನೆ ನಿಲ್ಲಿಸ್ಸೇ ನಿಲ್ಲಿಸ್ತೀವಿ ಅಂತಾರ.

ಒಟ್ಟಿನಲ್ಲಿ, ಘನತ್ಯಾಜ್ಯ ವಿಲೇವಾರಿ ಘಟಕದ ವಿಚಾರವಾಗಿ ಗ್ರಾಮಸ್ಥರ ವಿರೋಧ ದಿನದಿಂದ ದಿನಕ್ಕೆ ಜೋರಾಗ್ತಿದ್ದು, ಮಹಾನಗರ ಪಾಲಿಕೆ ಮುಂದೇನು ಮಾಡ್ತದ ಅನ್ನೊದು ಕುತೂಹಲ ಮೂಡಸೈತಿ ನೋಡ್ರಿ.

ವರದಿ: ಮಂಜುನಾಥ ಕವಳಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/08/2026 08:58 pm

Cinque Terre

12.45 K

Cinque Terre

0

ಸಂಬಂಧಿತ ಸುದ್ದಿ