ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಪೋಕ್ಸೊ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಹುಬ್ಬಳ್ಳಿಯ ಜೆ.ಸಿ. ನಗರದಲ್ಲಿರುವ 'ಅನ್ನಪೂರ್ಣ ನರ್ಸಿಂಗ್ ಹೋಮ್' ವೈದ್ಯರು, ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾದರೆ ಹಣದ ಆಸೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕಾನೂನುಬಾಹಿರವಾಗಿ ಹೆರಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಇದೇ ವಿಚಾರವಾಗಿ ಅನ್ನಪೂರ್ಣ ನರ್ಸಿಂಗ್ ಹೋಮ್ ಮೇಲೆ ಹಳೇ ಹುಬ್ಬಳ್ಳಿ ಮತ್ತು ಶಹರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಆ ನರ್ಸಿಂಗ್ ಹೋಮ್ ಮೇಲೆ ಕಾನೂನು ಕ್ರಮ ಜರುಗಿಸಿಲ್ಲ. ಇಂದಿಗೂ ರಾಜಾರೋಷವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಳೇ ಹುಬ್ಬಳ್ಳಿ ಭಾಗದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೊ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ತಿಂಗಳುಗಳಿಂದ ಬಾಲಕಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 39 ವರ್ಷದ ಆರೋಪಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ 2025ರ ಆಗಸ್ಟ್‌ನಿಂದ 2026ರ ಮೇ ತಿಂಗಳವರೆಗೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅದೇ ಬಾಲಕಿ ಗರ್ಭಿಣಿಯಾದಾಗ ಅನ್ನಪೂರ್ಣ ನರ್ಸಿಂಗ್ ಹೋಮ್‌ಗೆ ಹೋದ ವೇಳೆ, ಅಲ್ಲಿದ್ದ ವೈದ್ಯೆ ಡಾ. ಸುಶೀಲಾ ಪಾಟೀಲ್ ಪೊಲೀಸರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸದೆ ಹಣದ ಆಸೆಗಾಗಿ ಆ ಬಾಲಕಿಗೆ ಡೆಲಿವರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮಗುವನ್ನು ಮಾರಾಟ ಮಾಡಿರುವ ಬಗ್ಗೆಯೂ ದೂರು ದಾಖಲಾಗಿದೆ. ಈ ಪ್ರಕರಣ ಹೊರಬರುತ್ತಿದ್ದಂತೆಯೇ ಅನ್ನಪೂರ್ಣ ನರ್ಸಿಂಗ್ ಹೋಮ್ ವೈದ್ಯರ ಕೈವಾಡ ಇರುವುದು ತಿಳಿದುಬಂದಿದೆ.
ಇದೇ ನರ್ಸಿಂಗ್ ಹೋಮ್ ಮೇಲೆ ಶಹರ ಪೊಲೀಸ್ ಠಾಣೆ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇಷ್ಟೆಲ್ಲಾ ಆದರೂ ಕೂಡ ಈ ನರ್ಸಿಂಗ್ ಹೋಮ್ ಇಂದಿಗೂ ಸೀಲ್ ಡೌನ್ ಆಗದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇಂತಹ ಅಕ್ರಮ ಚಟುವಟಿಕೆ ನಡೆಸುತ್ತಿರುವ ಕ್ಲಿನಿಕ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕದಡಿ ಒಂದೂವರೆ ವರ್ಷದಲ್ಲಿ 13 ಅಪ್ರಾಪ್ತ ಬಾಲಕಿಯರಿಗೆ ಹೆರಿಗೆಯಾಗಿದೆ. ಕೆಲ ಮಕ್ಕಳ ಪಾಲನೆ ಬಾಲಮಂದಿರದಲ್ಲಿ ನಡೆಯುತ್ತಿದ್ದು, ಪರಿಸ್ಥಿತಿ ಮನಕಲಕುವಂತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2026 09:35 pm