ತಂದೆ ಜೀವನಪೂರ್ತಿ ಮಕ್ಕಳಿಗಾಗಿ ಕಷ್ಟಪಡುವ ವ್ಯಕ್ತಿ. ತನ್ನ ಸಂತೋಷವನ್ನು ಬದಿಗಿಟ್ಟು, ಮಕ್ಕಳ ಭವಿಷ್ಯವೇ ತನ್ನ ಕನಸಾಗಿಸಿಕೊಂಡ ಜೀವ. ಆದರೆ ವಿಧಿಯಾಟ ಕೆಲವೊಮ್ಮೆ ಎಷ್ಟು ಕ್ರೂರವಾಗಿರುತ್ತದೆ ಅಂದ್ರೆ ಪದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ.
ಹರಿಯಾಣದ ಸೋನಿಪತ್‌ನ ವೆಸ್ಟ್ ರಾಮ್ ನಗರದಲ್ಲಿರುವ 'ಸಮಾಜ ಕಲ್ಯಾಣ ಶಿಕ್ಷಣ ಸಮಿತಿ' ವೃದ್ಧಾಶ್ರಮದಲ್ಲಿದ್ದ ಮೂಲತಃ ಮುಂಬೈನ ಜವಳಿ ಉದ್ಯಮಿ ಶಿವಚರಣ್ ರಾಮ್ ರತನ್ ಗುಪ್ತಾ ಎಂಬ ವೃದ್ಧ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಅವರ ಮೂವರು ಪುತ್ರಿಯರು ತಂದೆಯ ಅಂತಿಮ ದರ್ಶನಕ್ಕೂ ಬಾರದೆ ವಿಡಿಯೋ ಕಾಲ್ ಮೂಲಕ ಅಂತ್ಯಕ್ರಿಯೆ ವೀಕ್ಷಿಸಿದ್ದಾರೆ.
ಗುಪ್ತಾ ಅವರಿಗೆ ಮೂವರೂ ಹೆಣ್ಣುಮಕ್ಕಳು ಎಲ್ಲರೂ ಉತ್ತಮ ಶಿಕ್ಷಣ ಪಡೆದವರು ಹಿರಿಯ ಮಗಳು ಅನಿತಾ ನೇಪಾಳದಲ್ಲಿ (ಶಿಕ್ಷಕಿ), ಎರಡನೇ ಮಗಳು ನಿಶಾ ಉತ್ತರ ಪ್ರದೇಶದ ಅಜಂಘಡದಲ್ಲಿ ಹಾಗೂ ಕಿರಿಯ ಮಗಳು ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ.
ಮಕ್ಕಳಿಗಾಗಿ ತಮ್ಮ ಇಡೀ ಜೀವನವನ್ನೇ ಧಾರೆ ಎರೆದಿದ್ದ ಶಿವಚರಣ್ ಅವರು, ತಮ್ಮ ಪತ್ನಿ ಮೀನಾ ಅವರೊಂದಿಗೆ ವೃದ್ಧಾಶ್ರಮ ಸೇರಿದ್ದರು. ಪತ್ನಿ ನಿಧನದ ನಂತರ ಒಂಟಿಯಾಗಿದ್ದ ಅವರು ಅನಾರೋಗ್ಯಕ್ಕೆ ಒಳಗಾದಾಗ, ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರು ಮಕ್ಕಳಿಗೆ ಮಾಹಿತಿ ನೀಡಿದರೂ ಯಾರೂ ಬರಲಿಲ್ಲ.
ತಂದೆಯ ನಿಧನದ ಸುದ್ದಿ ತಿಳಿದಾಗ ನಮಗೆ ಸೋನಿಪತ್‌ಗೆ ಬರಲು ಸಮಯವಿಲ್ಲ ಎಂದು ಹೇಳಿ ಆನ್‌ಲೈನ್‌ನಲ್ಲಿ ₹5,100 ಕಳುಹಿಸಿ ಅಂತ್ಯಕ್ರಿಯೆ ನಡೆಸುವಂತೆ ತಿಳಿಸಿದ್ದಾರೆ.
ವಿಡಿಯೋ ಕಾಲ್ ಮೂಲಕ ನಡೆಯುತ್ತಿದ್ದ ಅಂತಿಮ ವಿಧಿವಿಧಾನದ ವೇಳೆ "ಇನ್ನು ಎಷ್ಟು ಸಮಯ ಬೇಕು? ನಾವು ಸ್ನಾನ ಮಾಡಿ ಊಟ ಮಾಡಬೇಕು" ಎಂದು ಮಗಳೊಬ್ಬಳು ಹೇಳಿರುವುದು ಮಕ್ಕಳ ಕಲ್ಲುಮನಸ್ಸಿಗೆ ಸಾಕ್ಷಿಯಾಗಿದೆ. ಕೊನೆಗೆ ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸೇರಿ ಗುಪ್ತಾ ಅವರ ಕಣ್ಣುಗಳನ್ನು ದಾನ ಮಾಡಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ,ತಂದೆ-ತಾಯಿಯೊಂದಿಗೆ ಕಳೆಯುವ ಕೊನೆಯ ಕ್ಷಣಗಳನ್ನು ಯಾವ ಸಾಧನೆಯೂ ಮರಳಿ ಕೊಡಲಾರದು. ಸಮಯ ಯಾರಿಗಾಗಿ ಕಾಯುವುದಿಲ್ಲ. ಪ್ರೀತಿಪಾತ್ರರ ಜೊತೆ ಕಳೆಯುವ ಪ್ರತಿಯೊಂದು ಕ್ಷಣವೂ ಕೂಡ ಅತ್ಯಮೂಲ್ಯ.
PublicNext
06/08/2026 10:19 pm