ಹಾನಗಲ್: ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ದೊರೆಯುವ ಪ್ರಾಥಮಿಕ ಚಿಕಿತ್ಸೆ ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಾನಗಲ್ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.
ಬುಧವಾರ ತಾಲೂಕಿನ ಹರವಿ, ಮಾರನಬೀಡ ಹಾಗೂ ಕೀರವಾಡಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೊಪ್ಪರಸಿಕೊಪ್ಪ, ಯಳವಟ್ಟಿ, ನಿಟಗಿನಕೊಪ್ಪ, ಕರಗುದರಿ, ಅಕ್ಕಿಆಲೂರು, ನೀರಲಗಿ ಹಾಗೂ ಆಡೂರು ಗ್ರಾಮಗಳಲ್ಲಿಯೂ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹರವಿ ಆರೋಗ್ಯ ಮಂದಿರಕ್ಕೆ ರಸ್ತೆ ನಿರ್ಮಾಣಕ್ಕಾಗಿ ₹25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ, ಶ್ರೀನಿವಾಸ ಮಾನೆ ಸರ್ಕಾರದಲ್ಲಿ ಬಹಳ ಪವರ್‌ಫುಲ್ ವ್ಯಕ್ತಿ. ದಿ. ಸಿ.ಎಂ. ಉದಾಸಿ ಅವರು ಮಂತ್ರಿ ಇದ್ದ ಸಂದರ್ಭದಲ್ಲಿ ತಂದ ಅನುದಾನ ತರುವಷ್ಟು ಶಕ್ತಿ, ಸಾಮರ್ಥ್ಯ ಶ್ರೀನಿವಾಸ ಮಾನೆ ಹೊಂದಿದ್ದಾರೆ. ಇನ್ನೂ ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ.
ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಆರೋಗ್ಯಯುತ ಜೀವನಕ್ಕಾಗಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ವರದಿ : ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್
PublicNext
17/09/2026 06:34 pm
LOADING...