ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯ ಗಬ್ಬೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ₹700 ಕೋಟಿ ವೆಚ್ಚದ 1,200 ಹಾಸಿಗೆಗಳ ಆಸ್ಪತ್ರೆ ಹಾಗೂ ಜೆಜಿಎಂಎಂಎಂಸಿ ಕಾಲೇಜಿನ ಲೋಕಾರ್ಪಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಶರಣಪ್ರಕಾಶ ಪಾಟೀಲ ಹಾಗೂ ಗಣ್ಯರು ವಿದ್ಯುಕ್ತವಾಗಿ ನೆರವೇರಿಸಿದರು.
ಉತ್ತರ ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಬಲ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಗಬ್ಬೂರಿನಲ್ಲಿ ನಿರ್ಮಿಸಲಾಗಿರುವ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ ಹಾಗೂ 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೂರುಸಾವಿರಮಠದಿಂದ ದಾನವಾಗಿ ನೀಡಲಾದ ಭೂಮಿಯಲ್ಲಿ 50 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಸಮಗ್ರ ವೈದ್ಯಕೀಯ ಕ್ಯಾಂಪಸ್‌ಗೆ ಸುಮಾರು ₹700 ಕೋಟಿ ಹೂಡಿಕೆ ಮಾಡಲಾಗಿದೆ. 30 ಲಕ್ಷ ಚದರ ಅಡಿಗೂ ಅಧಿಕ ನಿರ್ಮಿತ ಪ್ರದೇಶ ಹೊಂದಿರುವ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಚಿಕಿತ್ಸೆ ಹಾಗೂ ಸಂಶೋಧನೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
2021ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮೋದನೆ ಪಡೆದ ವೈದ್ಯಕೀಯ ಕಾಲೇಜು 2022ರಲ್ಲಿ ಮೊದಲ ಬ್ಯಾಚ್ ಆರಂಭಿಸಿದೆ. ಪ್ರಸಕ್ತ ಸುಮಾರು 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, MBBS ಪ್ರವೇಶ ಸಾಮರ್ಥ್ಯವನ್ನು 200ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 20 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2026 05:00 pm
LOADING...