ಅಳ್ನಾವರ: ಪಟ್ಟಣದ ನೆಹರುನಗರ ಬಡಾವಣೆಯ ಆದರ್ಶ ಗಜಾನನ ಸೇವಾ ಮಂಡಳಿಯ ವತಿಯಿಂದ 49ನೇ ಗಣೇಶೋತ್ಸವವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಗುತ್ತಿದೆ. ಉತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ಕಾಳಿಂಗ ಮರ್ದನ ಸನ್ನಿವೇಶದ ಗಣೇಶನ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ.
ಕಾಳಿಂಗ ಮರ್ದನವು ಶ್ರೀಕೃಷ್ಣನ ಬಾಲಲೀಲೆಯಲ್ಲಿನ ಪ್ರಮುಖ ಪ್ರಸಂಗವಾಗಿದೆ. ಯಮುನಾ ನದಿಯಲ್ಲಿ ವಾಸವಿದ್ದು, ನೀರನ್ನು ವಿಷಪೂರಿತಗೊಳಿಸುತ್ತಿದ್ದ ಕಾಳಿಂಗ ಸರ್ಪವನ್ನು ಶ್ರೀಕೃಷ್ಣನು ಮರ್ದಿಸಿ, ಅಲ್ಲಿನ ಜನರಿಗೆ ನೆಮ್ಮದಿ ಕಲ್ಪಿಸಿದ ಪೌರಾಣಿಕ ಸನ್ನಿವೇಶವನ್ನು ಈ ಬಾರಿ ಗಣೇಶ ಮೂರ್ತಿಯ ಅಲಂಕಾರದಲ್ಲಿ ಬಿಂಬಿಸಲಾಗಿದೆ. ಈ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಸನ್ನಿವೇಶವು ಭಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ.
ಉತ್ಸವದ ಅಂಗವಾಗಿ ಪ್ರತಿದಿನ ಗಣೇಶನಿಗೆ ವಿಶೇಷ ಪೂಜೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣೇಶನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಂಟಪದಲ್ಲಿ ಮೂಡಿಬರುತ್ತಿರುವ ಭಕ್ತಿಗೀತೆಗಳ ಇಂಪಾದ ಸಂಗೀತವೂ ಭಕ್ತರನ್ನು ಆಕರ್ಷಿಸುತ್ತಿದೆ.
ಮುಂದಿನ ವರ್ಷ ಮಂಡಳಿಯ 50ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಈಗಿನಿಂದಲೇ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಸಮಿತಿಯ ಹಿರಿಯರಾದ ಕಿರಣ್ ಗಡಕರ್ ತಿಳಿಸಿದ್ದಾರೆ.
Kshetra Samachara
19/09/2026 07:17 pm
LOADING...