ಮೊಳಕಾಲ್ಮುರು: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಡಿಜೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಸಚಿವ ಶ್ರೀರಾಮುಲು ಬೃಹತ್ ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಮೊಳಕಾಲ್ಮುರು ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಡೆಯುತ್ತಿದ್ದು, ಡಿಜೆ ಬಳಕೆಗೆ ಪೊಲೀಸ್ ಇಲಾಖೆ ನಿರಾಕರಿಸಿದೆ. ಇದರಿಂದ ಆಕ್ರೋಶಗೊಂಡ ಮಾಜಿ ಸಚಿವ ಶ್ರೀರಾಮುಲು ಹಾಗೂ ಅವರ ಬೆಂಬಲಿಗರು ಸಾವಿರಾರು ಜನರೊಂದಿಗೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ರಾಜಣ್ಣ ಅವರು ಶ್ರೀರಾಮುಲುವರನ್ನು ಮನವೊಲಿಸಲು ಯತ್ನಿಸಿದರು. ಆದರೆ ಶ್ರೀರಾಮುಲು ಪ್ರತಿಕ್ರಿಯಿಸಿ, “ವರ್ಷಕ್ಕೊಮ್ಮೆ ನಡೆಯುವ ಹಬ್ಬದ ಶೋಭಾಯಾತ್ರೆಗೆ ಡಿಜೆ ಅನುಮತಿ ನಿರಾಕರಣೆ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ. ಕಳೆದ 58 ವರ್ಷಗಳಿಂದ ನಡೆಯುತ್ತಿರುವ ಶೋಭಾಯಾತ್ರೆಯಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಬಳ್ಳಾರಿ, ಚಳ್ಳಕೆರೆ ಸೇರಿ ಅನೇಕ ಕಡೆಗಳಲ್ಲಿ ಡಿಜೆಗೆ ಅವಕಾಶ ನೀಡಲಾಗುತ್ತಿದೆ. ಹಾಗಿದ್ದರೆ ಇಲ್ಲಿ ಮಾತ್ರ ಏಕೆ ನಿರಾಕರಣೆ?” ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಿವೈಎಸ್ಪಿ ರಾಜಣ್ಣ, “ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಯಾವುದೇ ಕಾರಣಕ್ಕೂ ಡಿಜೆ ಅನುಮತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. ಆದರೆ ಪಟ್ಟುಬಿಟ್ಟಿಲ್ಲದ ಶ್ರೀರಾಮುಲು ಮತ್ತು ಅವರ ಬೆಂಬಲಿಗರು ಡಿಜೆ ಅನುಮತಿ ಸಿಗಬೇಕು ಎಂಬ ಒತ್ತಾಯದೊಂದಿಗೆ ಪ್ರತಿಭಟನೆ ಮುಂದುವರಿಸಿದರು.
PublicNext
07/09/2025 04:07 pm