ಹುಬ್ಬಳ್ಳಿ: ಮುಂಬರುವ ಬೇಸಿಗೆಯಲ್ಲಿ ರೈತರಿಗೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಯಾಗದಂತೆ, ಹಗಲು ಹೊತ್ತಿನಲ್ಲಿಯೇ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಹೇಳಿದರು.
ಇಂದು ಹೆಸ್ಕಾಂ ನಿಗಮ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಏಳು ಜಿಲ್ಲೆಯ ರೈತರು, ಗ್ರಾಹಕರಿಗೆ ಸಮರ್ಪಕ ವಿದ್ಯುತ್ ನೀಡುವ ಕೆಲಸ ಹೆಸ್ಕಾಂ ವತಿಯಿಂದ ನಡೆಯುತ್ತಿದೆ. ರೈತರಿಗಾಗಿ ಸರ್ಕಾರದಿಂದ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದೆ.
ರೈತರು ವಿದ್ಯುತ್ ಜಾಲದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಂಡರೆ ಹೆಸ್ಕಾಂ ವತಿಯಿಂದ ಟ್ರಾನ್ಸ್‌ಫಾರ್ಮರ್ ನೀಡಲಾಗುತ್ತಿದೆ. ಈ ಯೋಜನೆಯ ಕುರಿತು ರೈತರಿಗೆ ತಿಳಿ ಹೇಳುವ ಕೆಲಸ ಮಾಡಬೇಕಿದೆ. ಅನಧಿಕೃತ ವಿದ್ಯುತ್ ಸಂಪರ್ಕಗಳಿಂದ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು, ಹೆಸ್ಕಾಂಗೆ ನಷ್ಟವಾಗುತ್ತಿದೆ. ಆದ್ದರಿಂದ ಶೀಘ್ರ ಸಂಪರ್ಕ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವಂತೆ ರೈತರಿಗೆ ತಿಳಿಸುವ ಕೆಲಸ ನಮ್ಮ ಅಧಿಕಾರಿಗಳು ಮಾಡಬೇಕು ಎಂದರು.
ರಾಜ್ಯ ಸರ್ಕಾರ ಗ್ರಾಹಕರಿಗಾಗಿ ಸ್ಮಾರ್ಟ್ ಮೀಟರ್ ಪರಿಚಯಿಸಿದೆ. ಸ್ಮಾರ್ಟ್ ಮೀಟರ್ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಸ್ಮಾರ್ಟ್ ಮೀಟರ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು. ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಪತ್ತೆ ಹಚ್ಚಿ, ಅವರಿಗೆ ಎಚ್ಚರಿಕೆ ನೀಡಿ, ಪುನಃ ವಿದ್ಯುತ್ ಕಳ್ಳತನ ಮಾಡುವುದು ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಿ ಎಂದು ಜಾಗೃತ ದಳದವರಿಗೆ ಸೂಚಿಸಿದರು. ಕರ್ತವ್ಯದ ಸಂದರ್ಭದಲ್ಲಿ ಸುರಕ್ಷತಾ ಕಿಟ್‌ಗಳನ್ನು ಪವರ್‌ಮೆನ್‌ಗಳು ತಪ್ಪದೆ ಉಪಯೋಗಿಸಬೇಕು. ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ನಿಮಗೆ ಎಷ್ಟು ಬೇಕು ಅಷ್ಟು ಸುರಕ್ಷತಾ ಕಿಟ್‌ಗಳನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್, ತಾಂತ್ರಿಕ ನಿರ್ದೇಶಕರಾದ ಜಗದೀಶ್ ಎಸ್ ಸೇರಿದಂತೆ ಹೆಸ್ಕಾಂನ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/01/2026 11:07 am