ಹಾವೇರಿ: ರಾಣೇಬೆನ್ನೂರು ಶಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕುತೂಹಲಕಾರಿ ಘಟನೆಯೊಂದರಲ್ಲಿ, ಬುರ್ಖಾಧಾರಿ ಮಹಿಳೆಯೊಬ್ಬಳು ಜನರ ಗಮನ ಬೇರೆಡೆ ಸೆಳೆದು ಬಟ್ಟೆ ಅಂಗಡಿಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಬಟ್ಟೆ ಖರೀದಿಗೆ ಬಂದಿದ್ದ ಮಹಿಳೆಯೋರ್ವಳು ಚಾಣಾಕ್ಷತನದಿಂದ ಗ್ರಾಹಕರೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾಳೆ. ಮಹಿಳೆಯ ಈ ಕೃತ್ಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ವಿಡಿಯೋ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಬುರ್ಖಾಧಾರಿ ಮಹಿಳೆಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಸಿರಿನಾಬಾನು ಎಂದು ಗುರುತಿಸಲಾಗಿದ್ದು, ಆಕೆಯಿಂದ ಸುಮಾರು 4 ಲಕ್ಷದ 76 ರೂಪಾಯಿ ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಣೇಬೆನ್ನೂರು ಶಹರಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
30/01/2026 04:40 pm
LOADING...