ಹುಬ್ಬಳ್ಳಿ: ರಾಜ್ಯದಲ್ಲಿ ಕುಷ್ಠರೋಗ ನಿರ್ಮೂಲನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜನರಲ್ಲಿನ ಮೂಢನಂಬಿಕೆ ಹಾಗೂ ಅರಿವಿನ ಕೊರತೆಯಿಂದ ಕುಷ್ಠರೋಗ ಪ್ರಕರಣಗಳು ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿನ ಅಂಕಿಅಂಶಗಳನ್ನು ನೋಡಿದರೆ ನಿಜಕ್ಕೂ ನೀವು ಬೆಚ್ಚಿ ಬೀಳುತ್ತೀರಾ..!
ಅದೆಷ್ಟೋ ಜಾಗೃತಿ ಮೂಡಿಸಿದರೂ, ರಾಜ್ಯದಲ್ಲಿ 1,922 ಜನರಲ್ಲಿ ಕುಷ್ಠರೋಗ ಸಕ್ರಿಯವಾಗಿದೆ. ಹೌದು..2025-26ನೇ ಆರ್ಥಿಕ ವರ್ಷದಲ್ಲಿ ಕಳೆದ ಡಿಸೆಂಬರ್‌ವರೆಗೆ 1,611 ಜನರಲ್ಲಿ ಹೊಸದಾಗಿ ಕುಷ್ಠರೋಗ ಪತ್ತೆಯಾಗಿದ್ದು, ಒಟ್ಟು 1,922 ಜನರು ಕುಷ್ಠರೋಗದಿಂದ ಬಳಲುತ್ತಿದ್ದಾರೆ. ಇವರಲ್ಲಿ 293 ಜನರಲ್ಲಿ ಸಾಧಾರಣ ಹಾಗೂ 1318 ಜನರಲ್ಲಿ ಗಂಭೀರ ಪ್ರಮಾಣದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ರಾಜ್ಯದ ಸ್ಥಾನಿಕತೆ 0.28ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.
ಇನ್ನು ರಾಜ್ಯದಾದ್ಯಂತ 12 ವರ್ಷದೊಳಗಿನ 50 ಮಕ್ಕಳು ಈ ರೋಗಕ್ಕೆ ಒಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನ ಅತೀಹೆಚ್ಚು ಜನರಲ್ಲಿ (262) ಈ ರೋಗ ಕಂಡುಬಂದಿದೆ. ಉಳಿದಂತೆ ಬೆಳಗಾವಿ (152), ರಾಯಚೂರು (100), ವಿಜಯನಗರ (98), ಉತ್ತರ ಕನ್ನಡ (89), ಕೊಪ್ಪಳ (84), ಬಳ್ಳಾರಿ (79) ಹಾಗೂ ಹಾವೇರಿ (72) ಅತ್ಯಧಿಕ ಕುಷ್ಠರೋಗ ಪ್ರಕರಣ ಒಳಗೊಂಡ ಜಿಲ್ಲೆಗಳಾಗಿವೆ. ಇನ್ನು ಚಿಕ್ಕಮಗಳೂರು (3), ಕೊಡಗು (3), ಹಾಸನ (8), ರಾಮನಗರ (12) ಜಿಲ್ಲೆಗಳಲ್ಲಿ ಅತೀ ಕಡಿಮೆ ಪ್ರಕರಣಗಳ ವರದಿಯಾಗಿದೆ.
ಚರ್ಮದ ಮೇಲೆ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆ, ದಪ್ಪನಾದ ಎಣ್ಣೆ ಪಸರಿಸಿದಂತಹ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚುವಲ್ಲಿ ತೊಂದರೆ, ವಾಸಿಯಾಗದ ಗಾಯಗಳು, ಬೆರಳು ಮಡಿಚಿಕೊಂಡಿರುವುದು ಕುಷ್ಠರೋಗದ ಲಕ್ಷಣಗಳಾಗಿವೆ. ಕುಷ್ಠರೋಗದ ಬಗ್ಗೆ ಅನೇಕ ಜನರಲ್ಲಿ ಮೂಢನಂಬಿಕೆ ಇದೆ. ಈ ರೋಗಕ್ಕೆ ತುತ್ತಾದವರು ಶಾಪಗ್ರಸ್ತರು ಎಂದು ದೂಷಿಸುತ್ತಾರೆ. ಆದರೆ, ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಜನರಲ್ಲಿ ಕಂಡುಬರುತ್ತದೆ. ಕೆಲವರಲ್ಲಿ ಈ ರೋಗದ ಬಗ್ಗೆ ಅರಿವಿನ ಕೊರತೆ, ಚಿಕಿತ್ಸೆ ಪಡೆಯಲು ರೋಗಿಗಳು ಹಿಂದೇಟು ಹಾಕುವುದರಿಂದ ಪ್ರಕರಣಗಳು ಹೆಚ್ಚುತ್ತಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/01/2026 05:50 pm